ಗಣೇಶೋತ್ಸವದ ಹೆಸರಿನಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ಆರೋಪ: ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು: ಗಣೇಶೋತ್ಸವದ ಹೆಸರಿನಲ್ಲಿ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಹಾಗೂ ಕೋಮು ಉದ್ವಿಗ್ನತೆ ಸೃಷ್ಟಿಸುವ ಸಾಧ್ಯತೆಯಿರುವ ಚಟುವಟಿಕೆಗಳ ಕುರಿತು ಬಿಜೆಪಿ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ MEI ಅಧ್ಯಕ್ಷ ಎಸ್. ಮನೋಹರ್ ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕ ಡಾ. ಎಂ. ಎ. ಸಲೀಂ ಅವರಿಗೆ ದೂರು ನೀಡಿದ್ದಾರೆ.
ಕರ್ನಾಟಕದಲ್ಲಿ ವಿನಾಯಕನ ಮೂರ್ತಿಯನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವುದು ಪ್ರತಿಯೊಬ್ಬರ ಹಕ್ಕಾಗಿದೆ. ಅದೇ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ನೀಡಿರುವ ಸಲಹೆಗಳು ಹಾಗೂ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ರಾಜಕೀಯಗೊಳಿಸಿ, ಪೊಲೀಸ್ ಅಧಿಕಾರಿಗಳನ್ನೇ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೇವರು ಮತ್ತು ಧರ್ಮದ ಹೆಸರನ್ನು ಬಳಸಿಕೊಂಡು ರಾಜಕೀಯವಾಗಿ ಜನರನ್ನು ಪ್ರಚೋದಿಸುವುದು ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತಂದು ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿ, ಕೋಮು ಪ್ರಚೋದನೆಗೆ ಕಾರಣವಾಗುವಂತಹ ಪರಿಸ್ಥಿತಿ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯಾವುದೇ ರೀತಿಯ ಕೋಮು ಉದ್ವಿಗ್ನತೆ ಅಥವಾ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ವಿಶೇಷವಾಗಿ ಬಿಜೆಪಿ ನಾಯಕರಾದ ಆರ್. ಅಶೋಕ್ ಮತ್ತು ಪ್ರತಾಪ್ ಸಿಂಹ ಅವರ ಹೇಳಿಕೆಗಳು ಹಾಗೂ ಚಟುವಟಿಕೆಗಳು ಸಾರ್ವಜನಿಕ ಶಾಂತಿ ಮತ್ತು ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವಂತಿವೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ಅದೇ ರೀತಿ, ಬಿಜೆಪಿ ಸಂಸದ ಯದುವೀರ್ ಒಡೆಯರ್ ಅವರು ಸಂಬಂಧಪಟ್ಟ ಸ್ಥಳಕ್ಕೆ ಆಗಮಿಸಿ ನೀಡಿರುವ ಹೇಳಿಕೆಗಳು ಅಥವಾ ಕೈಗೊಂಡಿರುವ ಕ್ರಮಗಳು ಯಾವುದೇ ರೀತಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿವೆಯೇ ಎಂಬುದನ್ನೂ ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಜನರನ್ನು ಪ್ರಚೋದಿಸುವ ಅಥವಾ ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡಬಾರದು. ಮೇಲ್ಕಂಡ ಎಲ್ಲಾ ವಿಷಯಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಕಾನೂನು ಉಲ್ಲಂಘನೆ ಅಥವಾ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ತನಿಖೆಯಲ್ಲಿ ದೃಢಪಟ್ಟಲ್ಲಿ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಪ್ರತಾಪ್ ಸಿಂಹ, ಬಿಜೆಪಿ ಸಂಸದ ಯದುವೀರ್ ಒಡೆಯರ್ ಹಾಗೂ ಸಂಬಂಧಪಟ್ಟ ಬಿಜೆಪಿ ನಾಯಕರು ಮತ್ತು ಇತರರ ವಿರುದ್ಧ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಗಣೇಶೋತ್ಸವವು ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂಕೇತವಾಗಬೇಕು. ಯಾವುದೇ ಧಾರ್ಮಿಕ ಆಚರಣೆಯನ್ನು ಕೋಮು ಉದ್ವಿಗ್ನತೆ ಅಥವಾ ರಾಜಕೀಯ ಸಂಘರ್ಷಕ್ಕೆ ಬಳಸಲು ಅವಕಾಶ ನೀಡಬಾರದು. ಈ ಕುರಿತು ಪೊಲೀಸ್ ಇಲಾಖೆ ತಕ್ಷಣ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕ ಶಾಂತಿ ಮತ್ತು ಕಾನೂನು-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.






