90 ಲಕ್ಷ ಮತದಾರರ ಗುರುತಿನ ಚೀಟಿ ಮುದ್ರಣದಲ್ಲಿ 20 ಕೋಟಿ ರೂ. ಹಗರಣ ಆರೋಪ: ಸಿಬಿಐ ತನಿಖೆಗೆ ಆರ್.ಅಶೋಕ್ ಆಗ್ರಹ

ಆರ್.ಅಶೋಕ್
ಬೆಂಗಳೂರು : ಎಸ್ಐಆರ್ ನಡೆಯಲಿದೆ ಎಂದು ಗೊತ್ತಿದ್ದರೂ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿ 20 ಕೋಟಿ ರೂ. ಹಗರಣ ನಡೆಸಲಾಗಿದೆ. ಇದರಲ್ಲಿ ಕಾಂಗ್ರೆಸ್ ಸರಕಾರ ಭಾಗಿಯಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಮತದಾರರಿಗೆ ಗುರುತಿನ ಚೀಟಿ ನೀಡಲು ರಾಜ್ಯ ಚುನಾವಣಾ ಆಯೋಗದಿಂದ ಕ್ರಮವಹಿಸಲಾಗಿದೆ. 90 ಲಕ್ಷ ಕಾರ್ಡ್ ಮುದ್ರಿಸಲು ಒಂದೇ ಟೆಂಡರ್ ಕರೆಯಲಾಗಿದೆ.
ಆದರೆ ಆರ್ಥಿಕ ಇಲಾಖೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿದರು.
ಪ್ರತಿ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ, ಫೋಟೊ ಸೆರೆಹಿಡಿದು ನಂತರ ಗುರುತಿನ ಚೀಟಿ ಮುದ್ರಣ ಮಾಡಬೇಕು. ಮೇ 14ರಂದು ಕೇಂದ್ರ ಚುನಾವಣಾ ಆಯೋಗದಿಂದ ಎಸ್ಐಆರ್ ಮಾಡಲಾಗುವುದು ಎಂದು ಆದೇಶ ನೀಡಲಾಗಿತ್ತು. ಆದರೆ ಮೇ 15 ರಂದು ರಾಜ್ಯ ಚುನಾವಣಾ ಆಯೋಗದಿಂದ ಟೆಂಡರ್ ಕರೆಯಲಾಗಿದೆ. ಮೇ 29ರಂದು ಕಾರ್ಯಾದೇಶ ನೀಡಲಾಗಿದೆ ಎಂದು ಅವರು ಆರೋಪಿಸಿದರು.
31 ಲಕ್ಷ ಬೋಗಸ್ ಕಾರ್ಡ್, ವೋಟ್ ಚೋರಿ: ವೋಟ್ ಚೋರಿ(ಮತಗಳ್ಳತನ) ಎನ್ನುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ಈಗ ಬೆಂಗಳೂರಿಗೆ ಬಂದು ಹೊಸ ಕಾರ್ಡ್ಗಳನ್ನು ವಿತರಣೆ ಮಾಡಬೇಕು. ಏಕೆಂದರೆ ಬೆಂಗಳೂರಿನಲ್ಲಿ ವಾಸ್ತವದಲ್ಲಿ 59 ಲಕ್ಷ ಮತದಾರರಿದ್ದರೆ, ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಕಾರ್ಡ್ ಮುದ್ರಿಸಲಾಗಿದೆ. ಇದು ಅತಿ ದೊಡ್ಡ ಹಗರಣವಾಗಿದ್ದು, ಸರಕಾರದಿಂದ ಇದಕ್ಕೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ವೋಟ್ ಚೋರಿಗೆ ಹಾಗೂ 31 ಲಕ್ಷ ಜನರಿಗೆ ಬೋಗಸ್ ಕಾರ್ಡ್ ನೀಡಲು ಕಾಂಗ್ರೆಸ್ ಕಾರಣವಾಗಿದೆ.
31 ಲಕ್ಷ ಮತದಾರರು ಎಲ್ಲಿದ್ದಾರೆ ಎಂಬುದನ್ನು ಈಗ ಸರಕಾರ ಪತ್ತೆ ಮಾಡಬೇಕಿದೆ. ಆದುದರಿಂದ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. ಜಿಬಿಎ ಚುನಾವಣೆಯಲ್ಲಿ ಅಕ್ರಮ ಮಾಡಲು ಕಾಂಗ್ರೆಸ್ ಸರಕಾರ ಇದನ್ನು ಮಾಡಿಸಿದೆ ಎಂದು ಅಶೋಕ್ ದೂರಿದರು.






