ಸುಪ್ರೀಂ ಕೋರ್ಟ್ನಲ್ಲಿ ತಮ್ಮ ಬಗ್ಗೆ ತಪ್ಪು ಮಾಹಿತಿ ಮಂಡನೆ ಆರೋಪ: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಲೋಕ್ ಕುಮಾರ್ ಪತ್ರ

ಬೆಂಗಳೂರು: ತಮ್ಮ ವಿರುದ್ದ ತಪ್ಪು ಮಾಹಿತಿಯ ವಾದವನ್ನು ಸುಪ್ರೀಂ ಕೋರ್ಟ್ ನಲ್ಲಿ ಮಂಡಿಸಿದ್ದಾರೆ ಎಂದು ಆಕ್ಷೇಪಿಸಿ ಕಾಗಾಗೃಹಗಳ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕೆಪಿಎಸ್ ಸಿ ಹಗರಣಕ್ಕೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿ ಕರ್ನಾಟಕ ಹೈಕೋರ್ಟ್ ಎಸ್ ಐ ಟಿ ರಚನೆ ಮಾಡಿತ್ತು. ಅದರೆ ರಾಜ್ಯಸರ್ಕಾರ ಅಲೋಕ್ ಕುಮಾರ್ ಹಾಗೂ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್ ನೇಮಕಕ್ಕೆ ಅಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ವೇಳೆ ರಾಜ್ಯ ಸರ್ಕಾರದ ಪರ ವಾದ ಮಾಡಿದ ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಮುಖವಾಗಿ ಅಲೋಕ್ ಕುಮಾರ್ ವಿಚಾರಣೆ ಎದುರಿಸಿದ್ದ ಪೋನ್ ಟ್ಯಾಪಿಂಗ್ ಪ್ರಕರಣವನ್ನ ಉಲ್ಲೇಖ ಮಾಡಿದ್ದರು. ಸದ್ಯ ಅಲೋಕ್ ಕುಮಾರ್ ಹಾಗೂ ದಿವ್ಯಾ ಗೋಪಿನಾಥ್ ನೇಮಕ್ಕೆ ತಡೆ ನೀಡಿರುವ ಸುಪ್ರೀಂ ಬೇರೆ ಅಧಿಕಾರಿಗಳ ಹೆಸರು ಸೂಚಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.
ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಲೋಕ್ ಕುಮಾರ್ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅವಧಿಯಲ್ಲಿ ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ 'ಬಿ-ರಿಪೋರ್ಟ್' (Closure Report) ಸಲ್ಲಿಸಿದ್ದು, ಅದನ್ನು 2024ರ ಫೆಬ್ರುವರಿ 13ರಂದು ಸಿಬಿಐ ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ. ಅಷ್ಟೇ ಅಲ್ಲದೆ, ಈ ವಿಷಯದಲ್ಲಿ ಇಲಾಖಾ ವಿಚಾರಣೆ ನಡೆಸುವ ಅಗತ್ಯವಿಲ್ಲವೆಂದು 2023ರಲ್ಲಿಯೇ ಅಂದಿನ ಮುಖ್ಯಮಂತ್ರಿಗಳು ಸ್ಪಷ್ಟ ಆದೇಶ ಹೊರಡಿಸಿದ್ದರು. ಅಲ್ಲದೆ ಈ ಹಿಂದೆ ಈ ಪ್ರಕರಣದಲ್ಲಿ ಹೊರಡಿಸಲಾಗಿದ್ದ ಶೋಕಾಸ್ ನೋಟಿಸ್ ಮತ್ತು ಚಾರ್ಜ್ಶೀಟ್ನ್ನು ಕೇಂದ್ರೀಯ ಆಡಳಿತಾತ್ಮಕ ಮಂಡಳಿ (CAT) ರದ್ದುಗೊಳಿಸಿದ್ದು, ಆ ಆದೇಶಕ್ಕೆ ಹೈಕೋರ್ಟ್ ಕೂಡ ತಡೆ ನೀಡಿಲ್ಲ ಎಂಬುದನ್ನು ಪತ್ರದಲ್ಲಿ ಅಲೋಕ್ ಕುಮಾರ್ ಉಲ್ಲೇಖಿಸಿದ್ದಾರೆ.
ನಾನು ಎಸ್ ಐ ಟಿ ಮುಖ್ಯಸ್ಥ ಆಗಬೇಕೆಂದು ಬಯಸಿರಲಿಲ್ಲ. ಹೈಕೋರ್ಟ್ ತನ್ನ ವಿವೇಚನೆಯಿಂದ ನೇಮಕ ಮಾಡಿದ್ದು. ಆದರೆ ಸುಪ್ರೀಂಕೋರ್ಟ್ ನಲ್ಲಿ ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿದ್ದು ದೇಶೀಯ ಮಟ್ಟದಲ್ಲಿ ನನ್ನ ವೃತ್ತಿಗೆ, ಗೌರವಕ್ಕೆ ಇದು ಧಕ್ಕೆ ಉಂಟು ಮಾಡುತ್ತದೆ. ಹೀಗಾಗಿ ಮುಂದಿನ ವಿಚಾರಣೆ ವೇಳೆಗೆ ಸುಪ್ರಿಂ ಕೋರ್ಟ್ ಗೆ ಸರಿಯಾದ ಮಾಹಿತಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.






