ಶಾಲಾ ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ | ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ; ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ

ಸಾಂದರ್ಭಿಕ ಚಿತ್ರ | Photo credit : AI
ಬೆಂಗಳೂರು : ರಾಜ್ಯ ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಹಾಗೂ ಶಿಕ್ಷಕಸ್ನೇಹಿಯಾಗಿಸಲು ರಾಜ್ಯ ಸರಕಾರವು ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ ತಂದು ಕರಡು ಅಧಿಸೂಚನೆ ಹೊರಡಿಸಿದೆ.
ಈ ಸಂಬಂಧ ನ.12ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆಯ ನಿಯಂತ್ರಣ) (ತಿದ್ದುಪಡಿ) ನಿಯಮಗಳು-2026’ ರ ಕರಡು ಅಧಿಸೂಚನೆಯನ್ನು ವಿಶೇಷ ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಿದೆ.
ಈ ಕರಡು ನಿಯಮಗಳ ಕುರಿತು ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ, ಅಧಿಸೂಚನೆ ಪ್ರಕಟವಾದ 15 ದಿನಗಳ ಒಳಗಾಗಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಬಹುಮಹಡಿಗಳ ಕಟ್ಟಡ, ಬೆಂಗಳೂರು) ಇವರಿಗೆ ಸಲ್ಲಿಸಲು ಸಾರ್ವಜನಿಕರು ಮತ್ತು ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.
ಕರಡು ನಿಯಮಗಳ ಮುಖ್ಯಾಂಶಗಳು :
ಕರಡು ನಿಯಮಗಳ ಪ್ರಕಾರ, ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಹಾಗೂ ಸರಕಾರದ ಪ್ರಮುಖ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ನಿರ್ಣಾಯಕ ಹುದ್ದೆಗಳೆಂದು ಪರಿಗಣಿಸಿ, ಇತರ ಹುದ್ದೆಗಳಿಗಿಂತ ಮೊದಲ ಆದ್ಯತೆಯ ಮೇರೆಗೆ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಕೆಪಿಎಸ್ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ವರ್ಗಾವಣೆ ಸಂದರ್ಭದಲ್ಲಿ ಹೆಚ್ಚುವರಿ ಪ್ರೋತ್ಸಾಹಕ ಅಂಕಗಳನ್ನು ನೀಡುವ ಪ್ರಸ್ತಾವವಿದೆ.
ಕರಡು ಅಧಿಸೂಚನೆಯಲ್ಲಿ ವಿವಿಧ ವರ್ಗಗಳ ವರ್ಗಾವಣೆಗೆ ವೃಂದವಾರು ಮಿತಿಯನ್ನು ನಿಗದಿಪಡಿಸಲಾಗಿದೆ. ಇದರಂತೆ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಗೆ ಶೇ.7, ವಲಯ ವರ್ಗಾವಣೆಗೆ ಶೇ.4, ವಿಭಾಗದೊಳಗಿನ ಕೋರಿಕೆ ವರ್ಗಾವಣೆಗೆ ಶೇ.2 ಹಾಗೂ ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆಗೆ ಶೇ.2ರಷ್ಟು ಮಿತಿ ನಿಗದಿ ಮಾಡಲಾಗಿದೆ.
ವರ್ಗಾವಣೆಗಾಗಿ ಶಿಕ್ಷಕರ ಸೇವಾ ಅವಧಿಯನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗುವುದು. ‘ಸಿ’ ವಲಯದಲ್ಲಿ ಸಲ್ಲಿಸಿದ ಪ್ರತಿ ವರ್ಷದ ಸೇವೆಗೆ 3 ಅಂಕ, ‘ಬಿ’ ವಲಯಕ್ಕೆ 2 ಅಂಕ ಹಾಗೂ ‘ಎ’ ವಲಯಕ್ಕೆ 1 ಅಂಕ ನೀಡಲಾಗುತ್ತದೆ. ಅಲ್ಲದೆ, ಪ್ರಸ್ತುತ ಶಾಲೆಯಲ್ಲಿ 3 ವರ್ಷ ಮೀರಿ ಸಲ್ಲಿಸಿದ ಪ್ರತಿ ವರ್ಷದ ಸೇವೆಗೆ ಹೆಚ್ಚುವರಿ 1 ಅಂಕ ಸಿಗಲಿದೆ. 6 ತಿಂಗಳು(180 ದಿನ) ಮತ್ತು ಅದಕ್ಕಿಂತ ಹೆಚ್ಚಿನ ಸೇವೆಯನ್ನು ಒಂದು ಪೂರ್ಣ ವರ್ಷವೆಂದು ಪರಿಗಣಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನಿರ್ಣಾಯಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ‘ಎ’, ‘ಬಿ’ ಮತ್ತು ‘ಸಿ’ ವಲಯಗಳಲ್ಲಿ ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಕ್ರಮವಾಗಿ 2, 4 ಮತ್ತು 6 ಅಂಕಗಳನ್ನು ನೀಡಲಾಗುವುದು. ಈ ಹುದ್ದೆಗಳಿಗೆ ಬರುವ ವರ್ಗಾವಣೆಗೆ ಸಾಮಾನ್ಯ ವರ್ಗಾವಣೆ ಮಿತಿ ಅನ್ವಯಿಸುವುದಿಲ್ಲ ಮತ್ತು ಖಾಲಿ ಹುದ್ದೆಗಳು ಭರ್ತಿಯಾಗುವವರೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಈ ಹುದ್ದೆಗಳಲ್ಲಿ ಶಿಕ್ಷಕರು ಕನಿಷ್ಠ 9 ವರ್ಷ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕರು, ಪತಿ/ಪತ್ನಿ ಅಥವಾ ಮಕ್ಕಳು ಹಾಗೂ ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರು ಜಿಲ್ಲಾ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಸಲ್ಲಿಸಬೇಕು. ವೈದ್ಯಕೀಯ ಕಾರಣಗಳ ಆಧಾರದಲ್ಲಿ ವರ್ಗಾವಣೆ ಕೋರುವವರ ಪ್ರಮಾಣಪತ್ರಗಳ ನೈಜತೆಯನ್ನು ವಿಭಾಗೀಯ ವಿಶೇಷ ಸಮಿತಿಯು ಪರಿಶೀಲಿಸಲಿದೆ. ಗರ್ಭಿಣಿ ಶಿಕ್ಷಕಿ ಅಥವಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಹೊಂದಿರುವ ಮಹಿಳಾ ಶಿಕ್ಷಕಿಯರಿಗೆ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿಶೇಷ ರಿಯಾಯಿತಿ ನೀಡಲು ಕರಡು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಶಾಲೆಯಲ್ಲಿ ಮಂಜೂರಾದ ಹುದ್ದೆಯ ಅಗತ್ಯವಿಲ್ಲದೆ ‘ಹೆಚ್ಚುವರಿ’ ಎಂದು ಗುರುತಿಸಿ ಬೇರೆ ಶಾಲೆಗೆ ಸ್ಥಳಾಂತರಗೊಂಡರೆ ಅಥವಾ ಹುದ್ದೆ ಹಿಂಪಡೆಯಲ್ಪಟ್ಟರೆ, ಅಂತಹ ಹುದ್ದೆಯಲ್ಲಿರುವ ಶಿಕ್ಷಕರು ನಿಯಮ 10ರ ಅಡಿಯಲ್ಲಿ ಯಾವುದೇ ಆದ್ಯತಾ ವಿನಾಯಿತಿಗೆ ಅರ್ಹರಾಗಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್), ಶಿಕ್ಷಕರ ತರಬೇತಿ ಸಂಸ್ಥೆಗಳು ಸೇರಿದಂತೆ ಜಿಲ್ಲೆ, ವಿಭಾಗ ಹಾಗೂ ರಾಜ್ಯಮಟ್ಟದ ಹುದ್ದೆಗಳನ್ನೂ ವರ್ಗಾವಣೆ ಸಮಾಲೋಚನೆ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ನಿರ್ಣಾಯಕ ಹುದ್ದೆಗಳು ಹಾಗೂ ವಿಶೇಷ ಆದ್ಯತೆಯ ಪ್ರಕರಣಗಳಲ್ಲಿ ತಾಲೂಕು ಮಟ್ಟದ ಶೇ.25ರ ಖಾಲಿ ಹುದ್ದೆಗಳ ಮಿತಿಯನ್ನು ಅನ್ವಯಿಸದಿರಲು ಅವಕಾಶ ಕಲ್ಪಿಸಲಾಗಿದೆ. ಡಯಟ್ ಹಾಗೂ ರಾಜ್ಯಮಟ್ಟದ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಕನಿಷ್ಠ 12 ವರ್ಷಗಳ ಸೇವಾನುಭವ ಕಡ್ಡಾಯಗೊಳಿಸಲು ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ವೃಂದಗಳ ವರ್ಗಾವಣೆ ಪ್ರಕ್ರಿಯೆಯನ್ನು ಆದ್ಯತಾ ಪಟ್ಟಿಗಳ ಅನುಸಾರ ತಂತ್ರಾಂಶದ ಮೂಲಕ ಆನ್ಲೈನ್ ಕೌನ್ಸೆಲಿಂಗ್ನಲ್ಲಿಯೇ ನಡೆಸಲಾಗುವುದು ಎಂದು ಕರಡು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.
ಸದ್ಯ ಇವೆಲ್ಲವೂ ಕರಡು ನಿಯಮಗಳಾಗಿದ್ದು, ಸಾರ್ವಜನಿಕರು ಹಾಗೂ ಶಿಕ್ಷಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸಿದ ಬಳಿಕ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.






