ಬಿಜೆಪಿ ಸದಸ್ಯರ ಧರಣಿ ಮಧ್ಯೆ ‘ಸಹಕಾರ ತಿದ್ದುಪಡಿ ವಿಧೇಯಕ’ ಪರಿಶೀಲನಾ ಸಮಿತಿಗೆ

ಬೆಂಗಳೂರು : ಘೋಷಣೆ ಆರೋಪ ಸಂಬಂಧ ಪರಿಷತ್ ನ ಬಿಜೆಪಿ ಸದಸ್ಯರು ಧರಣಿಯ ನಡುವೆಯೂ ಕರ್ನಾಟಕ ವಿಧಾನಮಂಡಲ(ಅನರ್ಹತಾ ನಿವಾರಣಾ) ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಭೂ ಕಂದಾಯ ವಿಧೇಯಕಗಳು ಅಂಗೀಕಾರಗೊಂಡವು. ಆದರೆ, ಕರ್ನಾಟಕ ಸಹಕಾರ ತಿದ್ದುಪಡಿ ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಲಾಯಿತು.
ಸಹಕಾರ ತಿದ್ದುಪಡಿ ವಿಧೇಯಕ ಮಂಡಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ತಳ ಸಮುದಾಯದವರಿಗೂ ಅವಕಾಶ ಸಿಗುವ ಉದ್ದೇಶದಿಂದ ಸಹಕಾರ ಸಂಘಗಳ ಮಂಡಳಿಗೆ ಮೂವರನ್ನು ನಾಮನಿರ್ದೇಶಿಸಬಹುದು. ಅಲ್ಲದೆ ಸಂಘಗಳಿಗೆ ಚುನಾವಣಾ ಪ್ರಾಧಿಕಾರ ಖರ್ಚು, ವೆಚ್ಚ ತಗ್ಗಿಸಲು ನಿಬಂಧಕರ ಮಟ್ಟದಲ್ಲಿ ಚುನಾವಣೆ ನಡೆಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸಹಕಾರ ಸಂಘಗಳ ಚುನಾವಣೆಯನ್ನು ನಡೆಸಲು ಚುನಾವಣಾ ಪ್ರಾಧಿಕಾರ ರದ್ದುಗೊಳಿಸಿ ನಿಬಂಧಕರ ಮಟ್ಟದಲ್ಲಿ ಚುನಾವಣೆ ನಡೆಸುವುದು ಪಾರದರ್ಶಕತೆ ತರಲು ಹೇಗೆ ಸಾಧ್ಯ? ಹೀಗಾಗಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಬಳಿಕ ಪರಿಶೀಲನಾ ಸಮಿತಿಗೆ ಒಪ್ಪಿಸಲು ಸದನ ನಿರ್ಣಯಿಸಿತು.





