''ಆ ಮಹಾನುಭಾವರ ಕೈಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 'ಜಾತಿ ವಿನಾಶ' ಕೃತಿ ಕೊಡಿ''

ಬೆಂಗಳೂರು, ಮಾ. 28: ಕ್ರಿಕೆಟ್ ದಿಗ್ಗಜ, ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಸಂಬಂಧಿಸಿದ ಒಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನೀಡಿದ ಹೇಳಿಕೆಗೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ತಿರುಗೇಟು ನೀಡಿದ್ದಾರೆ.
ಕೆ ಎಸ್ ಸಿ ಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ನಲ್ಲಿ ಅವರು, “ಈ ಚಿತ್ರ ಸಾವಿರಕ್ಕೂ ಹೆಚ್ಚು ಪದಗಳನ್ನು ಹೇಳುತ್ತದೆ. ನಮ್ಮ ರಾಜಕೀಯ ಸಂಸ್ಕೃತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ಇದು ಒಂದೇ ಚೌಕಟ್ಟಿನಲ್ಲಿ ತೋರಿಸುತ್ತದೆ” ಎಂದು ಟೀಕಿಸಿದ್ದರು.
ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರನ್ನು ಉಲ್ಲೇಖಿಸಿದ ಸೂರ್ಯ, “ಪಾಕಿಸ್ತಾನದ ವಿರುದ್ಧದ ತಮ್ಮ ಅಸಾಧಾರಣ ಬೌಲಿಂಗ್ ಪ್ರದರ್ಶನಗಳಿಂದ ದೇಶ ಯಾವತ್ತೂ ನೆನಪಿಸಿಕೊಳ್ಳುವ ಖ್ಯಾತ ಕ್ರಿಕೆಟಿಗ ಇಂದು ಮುಖ್ಯಮಂತ್ರಿಯ ಮುಂದೆ ಕೈಜೋಡಿಸಿ ನಿಂತಿದ್ದಾರೆ. ಆದರೆ ಅದು ಯಾವುದೇ ತಪ್ಪಿಗಾಗಿ ಅಲ್ಲ, ಕರ್ತವ್ಯ ವೈಫಲ್ಯಕ್ಕಾಗಿ ಅಲ್ಲ; ತಮ್ಮ ಕೆಲಸವನ್ನು ಮಾಡಿದ ಕಾರಣಕ್ಕೆ ಮಾತ್ರ” ಎಂದು ತೇಜಸ್ವಿ ಸೂರ್ಯ ಹೇಳಿದ್ದರು.
“ರಾಜಕಾರಣಿಗಳ ದುರ್ಬಲ ಅಹಂಕಾರಗಳಿಗೆ ಹೊಡೆತ ಬಿದ್ದಿದೆ. ಉಚಿತ ಟಿಕೆಟ್ ಗಳು, ವಿಶೇಷ ಸೌಲಭ್ಯಗಳು ಹಾಗೂ ಪ್ರಶ್ನಾತೀತ ಅರ್ಹತೆಯನ್ನು ನಿರೀಕ್ಷಿಸುವ ಸಂಸ್ಕೃತಿಗೆ ವೆಂಕಟೇಶ್ ಪ್ರಸಾದ್ ತಲೆಬಾಗಲಿಲ್ಲ. ಇದು ಕೇವಲ ಒಂದು ಘಟನೆಯಲ್ಲ; ಆಳವಾದ ಅವನತಿಯ ಸೂಚಕವಾಗಿದೆ. ಅಧಿಕಾರವನ್ನು ಹಕ್ಕು ಎಂದು ಕಾಣುವ ರಾಜಕೀಯ ವರ್ಗ ಬೆಳೆಯುತ್ತಿರುವುದು ಕಳವಳಕಾರಿ” ಎಂದು ತೇಜಸ್ವಿ ಸೂರ್ಯ ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದರು.
“ದೇಶಕ್ಕೆ ಸೇವೆ ಮಾಡಿದವರನ್ನು ಗೌರವಿಸುವ ಬದಲು, ಅಧಿಕಾರದಲ್ಲಿರುವವರು ಸವಲತ್ತುಗಳನ್ನು ಬೇಡುವುದು ಸರಿಯಲ್ಲ. ಅಹಂಕಾರ ಹೆಚ್ಚುತ್ತಿರುವ ಈ ವ್ಯವಸ್ಥೆ ಮುಂದುವರಿಯಬಾರದು. ಎಲ್ಲಾ ಹಂತಗಳಲ್ಲಿಯೂ ಹೊಸ ಪೀಳಿಗೆಯ ರಾಜಕೀಯ ವರ್ಗದ ಅಗತ್ಯವಿದೆ. ಈ ಘಟನೆ ನಮ್ಮನ್ನು ಕಳವಳಗೊಳಿಸದಿದ್ದರೆ, ಮತ್ತೇನೂ ಕಳವಳಗೊಳಿಸಲಾರದು. ಭಾರತ ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸುತ್ತದೆ. ವೆಂಕಟೇಶ್ ಪ್ರಸಾದ್ ಅವರೊಂದಿಗೆ ನಾವಿದ್ದೇವೆ” ಎಂದು ಸೂರ್ಯ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದರು.
►''ಆ ಮಹಾನುಭಾವರ ಕೈಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 'ಜಾತಿ ವಿನಾಶ' ಕೃತಿ ಕೊಡಿ''
ತೇಜಸ್ವಿ ಸೂರ್ಯ ಅವರ ಈ ಪೋಸ್ಟ್ ಗೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿರುವ ದಿನೇಶ್ ಅಮಿನ್ ಮಟ್ಟು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರ ಮನೆ ಸುತ್ತ ಬೀರುತ್ತಿರುವ ದುರ್ನಾತ ಕಸದ್ದಲ್ಲ, ಜಾತಿಯದ್ದೇ ಎಂದು ಪ್ರಶ್ನಿಸಿದ್ದು, ಹಾಗಿದ್ದರೆ ಅವರ ಕೈಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 'ಜಾತಿ ವಿನಾಶ' ಕೃತಿ ಕೊಡುವುದು ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ.
“ದೇಶಕ್ಕಾಗಿ ತನ್ನ ಕುಟುಂಬವನ್ನೇ ತ್ಯಾಗ ಮಾಡಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಕ್ರಿಕೆಟ್ ಕಪ್ ಗಳನ್ನು ಗೆದ್ದು ಕೋಟ್ಯಂತರ ಭಾರತೀಯರು ಇಡೀ ಜಗತ್ತಿನ ಎದುರು ತಲೆಗಳನ್ನು ಆಕಾಶದೆತ್ತರಕ್ಕೆ ಏರಿಸಿ ನಡೆದಾಡುವಂತೆ ಮಾಡಿದ್ದ ಅಪ್ರತಿಮ ಕ್ರಿಕೆಟ್ ಕಲಿ ಮತ್ತು ಹಿರಿಯರೂ ಜನಾನುರಾಗಿಗಳಾಗಿರುವ ಶ್ರೀಶ್ರೀಶ್ರೀ ವೆಂಕಟೇಶ್ ಪ್ರಸಾದ್ ಅವರು ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಬರುತ್ತಿದ್ದಂತೆಯೇ... ಜುಜುಬಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಕೂತ ಕುರ್ಚಿಯಿಂದ ದಿಗ್ಗನೇ ಎದ್ದು ಶ್ರೀಗಂಧದ ಮಾಲೆಯನ್ನು ಹಿಡಿದು ಮುಖ್ಯದ್ವಾರದ ವರೆಗೆ ಹೋಗಿ ತಲೆ ಬಾಗಿ ನಡುಬಗ್ಗಿಸಿ ಸಾಧ್ಯವಾದರೆ ಸಾಷ್ಟಾಂಗ ವಂದನೆ ಸಲ್ಲಿಸಿ ಸ್ವಾಗತಿಸಬೇಕಾಗಿತ್ತು. ಸಿದ್ದರಾಮಯ್ಯನವರು ವಯಸ್ಸಿನಲ್ಲಿ ಹಿರಿಯರಿದ್ದರೇನಂತೆ? ವೆಂಕಟೇಶ್ ಪ್ರಸಾದ್ ಕಿರಿಯರಿದ್ದರೇನಂತೆ? ನಮ್ಮ ಸನಾತನ ಪರಂಪರೆ ಏನು ಹೇಳುತ್ತೆ? ಮುಖ್ಯಮಂತ್ರಿಯವರ ನಡವಳಿಕೆ ಅತಿ ಖಂಡನೀಯ” ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರು ಮರ್ಯಾದಾ ಪುರುಷೋತ್ತಮ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶ ನಡವಳಿಕೆಯನ್ನು ನೋಡಿಯಾದರೂ ಕಲಿಯಬೇಕಿತ್ತು. ಹಿಂದುಳಿದ ಜಾತಿಗೆ ಸೇರಿರುವ ಮೋದಿಯವರು ಹೇಗೆ ತಮ್ಮ ಪಕ್ಷದ ಹಿರಿಯರು ಮತ್ತು ವಿಪ್ರಕುಲೊತ್ತಮರಾದ ಅಟಲ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣೀ, ಮುರಳಿ ಮನೋಹರ ಜೋಷಿ ಅವರನ್ನು ಕಂಡ ಕೂಡಲೇ ಓಡೋಡಿ ಹೋಗಿ ಅವರ ಪಾದಕ್ಕೆ ಬಿದ್ದು ನಮಸ್ಕರಿಸುತ್ತಿದ್ದರು. ಅವರನ್ನು ಕರೆದುಕೊಂಡು ಹೋಗಿ ಮಾರ್ಗದರ್ಶಕ ಮಂಡಲದ ಸಿಂಹಾಸನದಲ್ಲಿ ಕೂರಿಸಿ ಗೌರವಿಸಿದ್ದರು ಎನ್ನುವುದು ಎಲ್ಲ ಜನನಾಯಕರಿಗೆ ಒಂದು ಆದರ್ಶವಾಗಬೇಕು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರ ಮನೆ ಸುತ್ತ ಏನಿದು ದುರ್ನಾತ? ಯಾರಾದರೂ ಮಹಾನಗರ ಪಾಲಿಕೆಗೆ ಪೋನ್ ಮಾಡಿ ತುರ್ತಾಗಿ ಅಸಹ್ಯಕರ ತ್ಯಾಜ್ಯ ವಿಲೇವಾರಿ ಮಾಡಲು ಹೇಳಿ. ದುರ್ನಾತ ಕಸದ್ದಲ್ವಾ? ಜಾತಿಯದ್ದಾ? ಮೆದುಳು ತೊಳೆಯುವುದು ಪೌರಕಾರ್ಮಿಕರ ಕೆಲಸ ಅಲ್ವಾ? ಹಾಗಿದ್ದರೆ ಆ ಮಹಾನುಭಾವರ ಕೈಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ "ಜಾತಿ ವಿನಾಶ' ಕೃತಿಯನ್ನು ಕೊಡಿ ಎಂದು ದಿನೇಶ್ ಅಮಿನ್ ಮಟ್ಟು ಪೋಸ್ಟ್ ಮಾಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಚಾರವಾಗಿ ತೇಜಸ್ವಿ ಸೂರ್ಯ ಅವರ ಪೋಸ್ಟ್ ಮತ್ತು ಅದಕ್ಕೆ ದಿನೇಶ್ ಅಮಿನ್ ಮಟ್ಟು ಅವರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬಳಕೆದಾರರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ದಿನೇಶ್ ಅಮಿನ್ ಮಟ್ಟು ಅವರು ಪೋಸ್ಟ್ ಗೆ ಕಮೆಂಟ್ ಮಾಡಿರುವ ಒಬ್ಬ ಬಳಕೆದಾರರು, “ಡೈಪರ್ ಸೂರ್ಯ, ಮುಖ್ಯಮಂತ್ರಿ ಅವರನ್ನು ವೆಂಕಟೇಶ್ ಪ್ರಸಾದ್ ರವರು ವಿನಯಪೂರ್ವಕವಾಗಿ ನಮಿಸುತ್ತಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಹಿರಿಯತನದಿಂದ ಎಂದಿನಂತೆ ಗತ್ತು ಗಾಂಭೀರ್ಯದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಸಹಜವಾದ ಈ ಒಂದು ಚಿತ್ರವನ್ನು ಕೊಳಕು ಮನಸ್ಥಿತಿಯಿಂದ ನೋಡಿ ವಿಶ್ಲೇಷಿಸುವ ನಿಮ್ಮ ಈ ದಾರಿದ್ರ್ಯ ಬೌದ್ಧಿಕ ಮಟ್ಟಕ್ಕೆ ಧಿಕ್ಕಾರವಿರಲಿ. ನಿಮ್ಮಂತವರು ಜನಪ್ರತಿನಿಧಿಗಳಾಗಿರುವುದು ಈ ರಾಜ್ಯದ ದುರಂತವೇ ಸರಿ” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, “ಸಿಎಂಗಾಗ್ಲಿ ವೆಂಕಿಗಾಗ್ಲಿ ಏನೂ ಸಮಸ್ಯೆ ಇಲ್ಲ. ಉಳಿದವರಿಂದೇಕೆ ಕಲ್ಪನಾ ಢಂಗೂರ ಅಂತ ಅರ್ಥ ಆಗ್ತಿಲ್ಲ. ಎಲ್ಲ ಮನಸ್ಥಿತಿಯ ಸಂಕೇತ” ಎಂದು ಹೇಳಿದ್ದಾರೆ.
ಮತ್ತೊಬ್ಬರು,“ಭಾರತ ದೇಶದ ಅತ್ಯುನ್ನತ ಪ್ರಜೆ ದ್ರೌಪದಿ ಮುರ್ಮು ರವರನ್ನು ನಿಲ್ಲಿಸಿ ತಾವು ಕುಳಿತಿರುವ ದೃಶ್ಯಗಳು ಸಾಕಷ್ಟಿವೆ. ಪ್ರಧಾನಿಗಳಿಗೂ ಇದೇ ಮಾತನ್ನು ಹೇಳಿ. ಅಂದ್ರೆ ಅವರು ಜುಜುಬಿ ಅಲ್ಲವೇ? ಮಾತಿಗೂ ಮತಿಗೂ ಮಿತಿ ಇರಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಬ್ಬರು, “ಅದು ಬೆಂಗಳೂರ್ ಯುಜಿಡಿ ಕೊಚ್ಚೆ ಯಾಕೆ ಸರ್ ಅದರ ಮೇಲೆ ಕಲ್ಲು ಎಸೆಯುತ್ತೀರಾ” ಎಂದು ವ್ಯಂಗ್ಯವಾಡಿದ್ದಾರೆ.







