ಅನಂತಕುಮಾರ್ ಹೆಗಡೆ ಬಂಧನಕ್ಕೆ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೀಳುಮಟ್ಟದಲ್ಲಿ ಟೀಕೆ ಮಾಡಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರವಿವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಆವರಣದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅರೆ ಹುಚ್ಚ ಸಂಸ್ಕೃತಿ ಇಲ್ಲದೆ ನಾಲ್ಕು ವರ್ಷಗಳಿಂದ ಜನಸೇವೆ ಮಾಡದೆ ತಲೆಮರಿಸಿಕೊಂಡಿದ್ದು, ಈಗ ಏಕಾಏಕಿ ಕೀಳು ಮಟ್ಟದ ಟೀಕೆ ಮಾಡಿ ಕಾನೂನು ವ್ಯವಸ್ಥೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರಿಗೆ ಧಾರ್ಮಿಕ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಕೀಳುಮಟ್ಟದ ಅಭಿರುಚಿಯನ್ನು ಮೈಗೂಡಿಸಿಕೊಂಡಿದ್ದಾರೆ. ಪ್ರತಿ ಹಂತದಲ್ಲೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಧರ್ಮವನ್ನು ಒಡೆದು ಆಳುವುದು ಹಾಗೂ ಧರ್ಮದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸುವುದು ಬಿಜೆಪಿಯ ಉನ್ನಾರವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಟೀಕಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಪಕ್ಷದ ನಾಯಕರಾದ ಎ.ಆನಂದ್, ಜಿ.ಜನಾರ್ಧನ್, ಪರಿಸರ ರಾಮಕೃಷ್ಣ, ಹೇಮರಾಜು, ಪುಟ್ಟರಾಜು ಸೇರಿದಂತೆ ಪ್ರಮುಖರಿದ್ದರು.







