ಬೆಂಗಳೂರಿನಲ್ಲಿ ಫೆ.6ಕ್ಕೆ ಅಂಗನವಾಡಿ ನೌಕರರ ಧರಣಿ

ಬೆಂಗಳೂರು: ರಾಜ್ಯ ಸರಕಾರದ 2024-25ನೇ ಸಾಲಿನ ಬಜೆಟ್‍ನಲ್ಲಿ ಅಂಗನವಾಡಿ ನೌಕರರ ಗೌರವಧನವನ್ನು 15ಸಾವಿರ ರೂ.ಗಳಿಗೆ ಹೆಚ್ಚಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.6ಂದು ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ತಿಳಿಸಿದೆ.
ಶನಿವಾರ ಸಂಘದ ಕೆ.ಸೋಮಶೇಖರ್ ಯಾದಗಿರಿ ಪ್ರಕಟನೆ ಹೊರಡಿಸಿದ್ದು, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ, ಗೌರವಧನವನ್ನು 15 ಸಾವಿರ ರೂ.ಗೆ ಹೆಚ್ಚಿಸುವುದಾಗಿ ಮತ್ತು ನಿವೃತ್ತಿ ಪರಿಹಾರವನ್ನು 2 ಲಕ್ಷ ರೂ. ನೀಡುವುದಾಗಿ ನೀಡಿರುವ ಭರವಸೆ ನೀಡಿದೆ. ಅದರಂತೆ 2024-25ನೇ ಸಾಲಿನ ಬಜೆಟ್‍ನಲ್ಲಿ ಗೌರವಧನವನ್ನು ಹೆಚ್ಚಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಗ್ರ್ಯಾಚೂಟಿ(ಉಪಧನ) ಹಣ ನೀಡಲು ಸೂಕ್ತ ಆದೇಶ ಹೊರಡಿಸಬೇಕು ಎಂದಿದ್ದಾರೆ.
ಸೇವಾ ಹಿರಿತನ ಮತ್ತು ಮೆರಿಟ್ ಆಧರಿಸಿ ಮೇಲಿನ ಹುದ್ದೆಗೆ ಮುಂಬಡ್ತಿ ಮಾಡಬೇಕು. ಸುಪ್ರೀಂಕೋರ್ಟ್‍ನ ನಿರ್ದೇಶನದಂತೆ, ಐಸಿಡಿಎಸ್ ಕೆಲಸಗಳನ್ನು ಹೊರತುಪಡಿಸಿ, ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ನೀಡಬಾರದು. ಮಾತೃಪೂರ್ಣಯೋಜನೆ ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ಮನೆಗೆ ನೀಡಲು ಆದೇಶ ಮಾಡಬೇಕು ಮತ್ತು ಮಾತೃ ವಂದನಾ, ಬಾಗ್ಯಲಕ್ಷ್ಮೀ ಕೆಲಸಗಳಿಗೆ ಹೆಚ್ಚುವರಿ ಗೌರವಧನವನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.
ವಿವಿಧ ಸರ್ವೇಗಳನ್ನು ಮೊಬೈಲ್ ಮೂಲಕ ಮಾಡಲು ಬಲವಂತ ಪಡಿಸುವುದನ್ನು ನಿಲ್ಲಿಸಬೇಕು. ಬೆಲೆ ಏರಿಕೆಯ ಇಂದಿನ ದರದಲ್ಲಿ ಅಂಗನವಾಡಿ ಕೇಂದ್ರಗಳ ಬಾಡಿಗೆದರ, ಮೊಟ್ಟೆದರ, ಫ್ಲೆಕ್ಸಿ ಫಂಡ್ ಅನುದಾನ ಇತ್ಯಾದಿ ದರಗಳನ್ನು ಹೆಚ್ಚಿಸಬೇಕು. ಹಲವಾರು ತಿಂಗಳ ಕಾಲ ಬಾಕಿ ಹಣ ಪಾವತಿ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.







