‘ಒಳಮೀಸಲಾತಿ’ ಮಾ.12ರ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಮಾಡಿ: ಸಿಎಂಗೆ ಆಂಜನೇಯ ಆಗ್ರಹ

ಬೆಂಗಳೂರು : ‘ಪರಿಶಿಷ್ಟ ಜಾತಿಗಳಲ್ಲಿನ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಒಳಮೀಸಲಾತಿ ನೀಡಿ 56ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಮಾ.12ರ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಮಾಡಬೇಕು. ಇಲ್ಲದಿದ್ದರೇ ಅಣ್ಣ-ತಮ್ಮಂದಿರ ಸಣ್ಣ ಮನಸ್ಥಾಪದಿಂದ ದಲಿತ ಶಕ್ತಿಗೆ ದೊಡ್ಡ ಪೆಟ್ಟು ಬೀಳಲಿದೆ’ ಎಂದು ಮಾಜಿ ಸಚಿವ ಎಚ್.ಆಂಜನೇಯ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಮಂಗಳವಾರ ಸಿಎಂಗೆ ಪತ್ರ ಬರೆದಿರುವ ಅವರು, ಛಲವಾದಿ ಸಮುದಾಯದವರು ಯಾವುದೇ ಗೊಂದಲಕ್ಕೆ ಸಿಲುಕದೆ ಸಂವಿಧಾನ ಮತ್ತು ಅಂಬೇಡ್ಕರ್ ಆಶಯಗಳೊಂದಿಗೆ ಚಿಂತನೆ ನಡೆಸಬೇಕು. ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಮಾದಿಗ ಮತ್ತು ಸಣ್ಣಪುಟ್ಟ ಜಾತಿಗಳು ತಮ್ಮಂತೆ ಶಿಕ್ಷಣ, ಉದ್ಯೋಗ, ಹಣ-ಆಸ್ತಿ ಗಳಿಕೆಯಲ್ಲಿ ಮುಖ್ಯವಾಹಿನಿಗೆ ಬರಲಿ ಎಂಬ ಮಾತೃಹೃದಯ ಹೊಂದಬೇಕು ಎಂದು ಸಲಹೆ ನೀಡಿದ್ದಾರೆ.
56,432 ಹುದ್ದೆಗಳನ್ನು ತುಂಬಲು ನೀಡಿರುವ ನೋಟಿಪಿಕೇಷನ್ ರದ್ದುಗೊಳಿಸಿ ಒಳ ಮೀಸಲಾತಿ ಅಳವಡಿಸಿ ಹುದ್ದೆ ತುಂಬುವ ಪ್ರಕ್ರಿಯೇಯನ್ನು ಆರಂಭಿಸಬೇಕು. ಪಟ್ಟಭದ್ರರ ಮಾತುಗಳನ್ನು ಧಿಕ್ಕರಿಸಿ ಮಾದಿಗರಿಗೆ ನ್ಯಾಯ ಕೊಡಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಭಡ್ತಿಯಲ್ಲೂ ಒಳಮೀಸಲಾತಿ ನೀಡುವುದು ನ್ಯಾಯಸಮ್ಮತ. ಆದ್ದರಿಂದ, ಸರಕಾರಿ ನೌಕರರು, ಅಧಿಕಾರಿಗಳಿಗೆ ಭಡ್ತಿ ಮತ್ತು ಮುಂಭಡ್ತಿ ಬ್ಯಾಕ್‍ಲಾಗ್ ನೀಡುವಲ್ಲಿ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಅವರು ಕೋರಿದ್ದಾರೆ.
ಎಲ್ಲ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಯಾವ-ಯಾವ ಜಾತಿಯವರು ಎಷ್ಟು ಪ್ರಮಾಣದಲ್ಲಿ ಉದ್ಯೋಗ ಪಡೆದಿದ್ದಾರೆಂದು ಅಂಕಿ-ಅಂಶದ ಪಟ್ಟಿಯನ್ನು ಪ್ರಕಟಿಸಬೇಕು. ಲೋಕೋಪಯೋಗಿ ಇಲಾಖೆ ಮತ್ತಿತರ ಇಲಾಖೆಗಳಲ್ಲಿ ಸರಬರಾಜು ಮತ್ತು ಗುತ್ತಿಗೆಯಲ್ಲಿ 1 ಕೋಟಿ ರೂ.ವರೆಗೆ ಮೀಸಲಾತಿ ಜಾರಿಯಲ್ಲಿದೆ. ಗುತ್ತಿಗೆ ಮತ್ತು ಸರಬರಾಜಿನಲ್ಲೂ ಒಳಮೀಸಲಾತಿ ಅನ್ವಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಒದಗಿಸಿದ ಒಟ್ಟು ಅನುದಾನದಲ್ಲಿ ಶೇ.6ರಷ್ಟನ್ನು ಮಾದಿಗ ಸಮುದಾಯಕ್ಕೆ ವೆಚ್ಚ ಮಾಡುವ ಮೂಲಕ ಆರ್ಥಿಕ ಮೀಸಲಾತಿಯನ್ನು ಒದಗಿಸಬೇಕು. ಸಮಾಜದ ಆರೋಗ್ಯವನ್ನು ಕಾಪಾಡಲು ಪೌರಕಾರ್ಮಿಕರು ‘ಕಾಯಕ ಯೋಗಿ’ಗಳು. ಮಹಾನಗರಪಾಲಿಕೆಗಳು, ನಗರಸಭೆಗಳು, ಪುರಸಭೆಗಳು ಸೇರಿದಂತೆ ಎಲ್ಲೆಲ್ಲಿ ದಿನಗೂಲಿಯಡಿ ಕೆಲಸ ಮಾಡುತ್ತಿದ್ದಾರೊ ಅವರೆಲ್ಲರನ್ನು ಕಾಯಂಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.







