ಒಂದೇ ಚುನಾವಣೆಯಿಂದ ಖರ್ಚು ಕಡಿಮೆ, ಅಭಿವೃದ್ಧಿ ಹೆಚ್ಚು: ಅಣ್ಣಾಮಲೈ

ಬೆಂಗಳೂರು : ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾದೇಶಿಕ ಪಕ್ಷವು ರಾಷ್ಟ್ರಹಿತದೊಂದಿಗೆ ಹಾಗೂ ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ ಎಂದು ಬಿಜೆಪಿ ಮುಖಂಡ ಅಣ್ಣಾಮಲೈ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಜೈನ್ ವಿವಿಯಲ್ಲಿ ಏರ್ಪಡಿಸಿದ್ದ ‘ಒಂದು ದೇಶ ಒಂದು ಚುನಾವಣೆ’ ಕುರಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸಲು ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು. ಯುವಜನರು ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಮತದಾನದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕಿದೆ ಎಂದರು.
ಎಲ್ಲರೂ ಸಮಾನರು, ಪುರುಷ-ಮಹಿಳೆ ಸೇರಿ ಎಲ್ಲರಿಗೂ ಒಂದು ಮತದಾನದ ಹಕ್ಕಿದೆ ಎಂಬುದನ್ನು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲೇ ಜಾರಿಗೊಳಿಸಿದ ದೇಶ ನಮ್ಮದು. 1951-52ರಲ್ಲಿ ಮೊದಲ ಚುನಾವಣೆ ನಡೆದಿತ್ತು. 7 ಹಂತಗಳಲ್ಲಿ ಅದು ನಡೆಯಿತು. 57ರಲ್ಲಿ 2ನೇ ಚುನಾವಣೆ ನಡೆಸಲಾಯಿತು. 1952, 57, 62, 67ರಲ್ಲಿ ರಾಜ್ಯ ವಿಧಾನಸಭೆಗಳು-ಸಂಸತ್ತಿಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು ಎಂದು ಅವರು ಸ್ಮರಿಸಿದರು.
1970ರಲ್ಲಿ ಲೋಕಸಭೆಯನ್ನು ಒಂದು ವರ್ಷ ಮೊದಲೇ ವಿಸರ್ಜಿಸಲಾಯಿತು. ಕಮ್ಯುನಿಸ್ಟ್ ಪಕ್ಷದ ಆಡಳಿತ ಇದ್ದ ಕೇರಳದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಸಂವಿಧಾನಕ್ಕೆ ವಿರುದ್ಧವಾಗಿ ಆ ರಾಜ್ಯ ಸರಕಾರವನ್ನು ವಜಾ ಮಾಡಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸೇತರ ರಾಜ್ಯಗಳ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರು. ಹಿಂದೆ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಜನತಾ ಪಕ್ಷವೂ ಇದೇ ರೀತಿ ಮಾಡಿತ್ತು ಎಂದು ಹೇಳಿದರು.
ಒಂದೇ ಚುನಾವಣೆ ಎಂಬುದು ಸಾರ್ವಜನಿಕ ಹಿತಾಸಕ್ತಿಯ ಕ್ರಮವೇ ಹೊರತು ಇದನ್ನು ಹೇರುತ್ತಿಲ್ಲ. ಇದೊಂದು ಪ್ರಜಾಸತ್ತಾತ್ಮಕ ಕ್ರಮ. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2034ರಲ್ಲಿ ಒಂದೇ ಚುನಾವಣೆಯು ಜಾರಿ ಆಗಲಿದೆ. ಅತ್ಯಂತ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ ಬಗ್ಗೆ ದೇಶಾದ್ಯಂತ ಜನರ ಒಲವಿದ್ದರೂ ಚುನಾವಣಾ ಕ್ಷೇತ್ರದಲ್ಲಿ ಸುಧಾರಣೆ ತರಲು ನಾವು ಮುಂದಾಗಿದ್ದೇವೆ ಎಂದರು.
ದೇಶ ಮೊದಲು ಎಂಬ ಚಿಂತನೆಯೇ ಇದಕ್ಕೆ ಕಾರಣ. 4.5ಲಕ್ಷ ಕೋಟಿ ಹೆಚ್ಚುವರಿ ಜಿಡಿಪಿ, ಹೆಚ್ಚು ಯುವಜನರ ಭಾಗೀದಾರಿಕೆ, ಪ್ರಬುದ್ಧ-ಸುಸ್ಥಿರ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯೊಂದಿಗೆ ನಾವು ಒಂದೇ ಚುನಾವಣೆ ಕುರಿತು ಆಸಕ್ತಿ ತೋರಿದ್ದೇವೆ ಎಂದು ಅಣ್ಣಾಮಲೈ ವಿಶ್ಲೇಷಿಸಿದರು.
ಈ ವೇಳೆ ಶಾಸಕ ಸಿ.ಕೆ.ರಾಮಮೂರ್ತಿ, ಜಾಗೃತಿ ಸಮಿತಿ ಸಂಚಾಲಕ ನವೀನ್ ಶಿವಪ್ರಕಾಶ್, ಪರಿಷತ್ತಿನ ಮಾಜಿ ಸದಸ್ಯ ಅಶ್ವತ್ಥನಾರಾಯಣ್, ಜೈನ್ ವಿವಿ ಉಪಾಧ್ಯಕ್ಷ ರವೀಂದ್ರ ಭಂಡಾರಿ, ಜಂಟಿ ಕಾರ್ಯದರ್ಶಿ ಸಂತೋμï, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮತ್ತು ವಿವಿ ರಿಜಿಸ್ಟ್ರಾರ್ ಡಾ. ಜಿತೇಂದ್ರ ಮಿಶ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.







