ಅತಿಥಿ ಉಪನ್ಯಾಸಕರ ಆಯ್ಕೆ ಪಟ್ಟಿ ಪ್ರಕಟ

ಸಾಂದರ್ಭಿಕ ಚಿತ್ರ
ಬೆಂಗಳೂರು : ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ 2024-25ನೆ ಸಾಲಿಗೆ ಸಂಬಂಧಿಸಿದಂತೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಲು ಅತಿಥಿ ಉಪನ್ಯಾಸಕರನ್ನು ಆನ್ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದ್ದು, ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.
ಈ ಕುರಿತು ಇಲಾಖೆಯು ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದಂತೆ, ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳು ಆನ್ಲೈನ್ ಅರ್ಜಿಗಳಲ್ಲಿ ನೀಡಿರುವ ವಿದ್ಯಾರ್ಹತೆ, ಸೇವಾ ಅನುಭವ ಮತ್ತಿತರೆ ವಿವರಗಳನ್ನು ಆಧರಿಸಿ ರಾಜ್ಯವ್ಯಾಪಿ ವಿಷಯವಾರು ಮೆರಿಟ್ ಪಟ್ಟಿಯನ್ನು ಅನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
2024-25ನೇ ಶೈಕ್ಷಣಿಕ ಸಾಲಿಗೆ ಆಯ್ಕೆಗೊಳ್ಳುವ ಅತಿಥಿ ಉಪನ್ಯಾಸಕರನ್ನು 2025ರ ಆಗಸ್ಟ್ 2ರವರೆಗೆ ಮಾತ್ರ ಮುಂದುವರೆಸಿ, ನಂತರ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುವುದು. ಅತಿಥಿ ಉಪನ್ಯಾಸಕರಿಗೆ 15/19 ಗಂಟೆಗಳಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನ ಪಾವತಿಸುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಸಾಲಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರು ಪ್ರಾಂಶುಪಾಲರ ಗಮನಕ್ಕೆ ತಾರದೆ ಸತತವಾಗಿ 8 ದಿನಗಳಿಗಿಂತಲೂ ಹೆಚ್ಚಿನ ಅವಧಿಗೆ ಗೈರು ಹಾಜರಾದಲ್ಲಿ ಅಂತಹ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡಲು ಸಂಬಂಧಪಟ್ಟ ಪ್ರಾಂಶುಪಾಲರು ಕ್ರಮ ವಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.







