ಕೋರಮಂಗಲದ ಹುಕ್ಕಾ ಕೆಫೆಯಲ್ಲಿ ಬೆಂಕಿ ಅವಘಡ; ಜೀವ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಜಿಗಿದ ಯುವಕ..!
ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವ್ಯಕ್ತಿ

ಬೆಂಗಳೂರು, ಅ.18: ನಗರದ ಕೋರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಕಟ್ಟಡದ ನಾಲ್ಕನೆ ಮಹಡಿಯಲ್ಲಿದ್ದ ಮಡ್‍ಪೈಪ್ ಹುಕ್ಕಾ ಕೆಫೆಯಲ್ಲಿ ಬುಧವಾರ ಬೆಳಗ್ಗೆ 11.40ರ ವೇಳೆಗೆ ಬೆಂಕಿ ಅವಘಡ ಸಂಭವಿಸಿದ್ದು, ಜೀವ ಉಳಿಸಿಕೊಳ್ಳಲು ಯುವಕನೋರ್ವ ಕಟ್ಟಡದ ನಾಲ್ಕನೆ ಮಹಡಿಯಿಂದ ಜಿಗಿದು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲ ಮತ್ತು ಮೊದಲ ಮಹಡಿಯಲ್ಲಿ ಕಾರ್ ಶೋ ರೂಂ ಇದ್ದು, ಎರಡನೆ ಮತ್ತು ಮೂರನೆ ಮಹಡಿಯಲ್ಲಿ ಇತ್ತೀಚೆಗೆ ಹೊಸದಾಗಿ ಮಡ್ ಪೈಪ್ ಹುಕ್ಕಾ ಕೆಫೆಯನ್ನು ಆರಂಭಿಸಲಾಗಿತ್ತು. ನಾಲ್ಕನೇ ಮಹಡಿಯಲ್ಲಿರುವ ಕೆಫೆಯಲ್ಲಿ ಮೊದಲು ಶಾರ್ಟ್ ಸಕ್ರ್ಯೂಟ್ ಉಂಟಾಗಿ, ಆ ಬಳಿಕ ಅಡುಗೆ ಅನಿಲದ ಸುಮಾರು 8 ಸಿಲಿಂಡರ್‍ಗಳು ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ನಂತರ ನಿಯಂತ್ರಣಕ್ಕೆ ಬಾರದೇ ಎಲ್ಲ ಮಹಡಿಗಳಿಗೂ ಬೆಂಕಿ ಆವರಿಸಿದೆ ಎಂದು ತಿಳಿದು ಬಂದಿದೆ.
ಅದೇ ಕಟ್ಟಡದಲ್ಲಿದ್ದ ಪ್ರೇಮ್(29) ಎಂಬುವರು ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಈ ವೇಳೆ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ. ಮಡ್‍ಪೈಪ್ ಕೆಫೆ ಸಂಜೆಯಿಂದ ಆರಂಭವಾಗುವ ಹಿನ್ನೆಲೆ, ಮಧ್ಯಾಹ್ನದ ವೇಳೆ ಹೆಚ್ಚಿನ ಸಿಬ್ಬಂದಿಗಳೂ ಇರಲಿಲ್ಲ, ಗ್ರಾಹಕರೂ ಯಾರೂ ಇರಲಿಲ್ಲ. ಬೆಂಕಿ ಅವಘಡದ ನಂತರ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಕಿ ಅವಘಡದ ವಿಷಯ ತಿಳಿದ ಬಳಿಕ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಕಟ್ಟಡದಲ್ಲಿದ್ದ ಅಪಾರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ ಪಕ್ಕದ ಕಟ್ಟಡದಲ್ಲಿಯು ಸಹ ಬೆಂಕಿ ಆವರಿಸಿಕೊಂಡು ದಟ್ಟ ಹೊಗೆ ಕಾಣಿಸಿತ್ತು. ಪಕ್ಕದಲ್ಲಿಯೂ ಕಾರು ಶೋ ರೂಂ ಮತ್ತು ಪ್ರತಿಲಿಪಿ ಕಚೇರಿ ಇದ್ದು, ಕೂಡಲೇ ಸಿಬ್ಬಂದಿಯನ್ನು ಹೊರಗೆ ತಂದು ನೀರು ಸಿಂಪಡಣೆ ಮಾಡಲು ಯತ್ನಿಸಿದರೂ, ಕೆಲ ವಸ್ತುಗಳು ಬೆಂಕಿಗಾಹುತಿಯಾದವು. ಇನ್ನು ಕಟ್ಟಡದ ಬಳಿ ನಿಲ್ಲಿಸಲಾಗಿದ್ದ ಸುಮಾರು ಐದಾರು ದ್ವಿಚಕ್ರ ವಾಹನಗಳು ಸಹ ಸುಟ್ಟು ಕರಕಲಾಗಿವೆ ಎಂದು ಹೇಳಲಾಗಿದೆ.







