ದೇಶದಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರಧಾನಿಯ ಗಮನ ಸೆಳೆಯಲಾಗಿದೆ : ಆರ್ಚ್ ಬಿಷಪ್ ಆ್ಯಂಡ್ರೂಸ್ ತಾಝತ್

ಬೆಂಗಳೂರು : ದೇಶದಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯಗಳ ಬಗ್ಗೆ ಕೆಥೊಲಿಕ್ ಬಿಷಪ್‌ಗಳ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದೆ ಎಂದು ಸಿಬಿಸಿಐ ಅಧ್ಯಕ್ಷ ಆರ್ಚ್ ಬಿಷಪ್ ಆ್ಯಂಡ್ರೂಸ್ ತಾಝತ್ ಹೇಳಿದ್ದಾರೆ.
ಬೆಂಗಳೂರಿನ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡಮಿಯಲ್ಲಿ ಫೆ.4ರಿಂದ ಆರು ದಿನಗಳ ಕಾಲ ನಡೆಯಲಿರುವ ಭಾರತದ ಕೆಥೊಲಿಕ್ ಬಿಷಪ್‌ಗಳ ಸಮ್ಮೇಳನದ (ಸಿಬಿಸಿಐ) 37ನೇ ಸಮಗ್ರ ಸಭೆಗೂ ಮೊದಲು ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ʼಕೇವಲ ಧರ್ಮದ ಆಧಾರದ ಮೇಲೆ ಕ್ರೈಸ್ತರ ಮೇಲೆ ದಾಳಿಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಪ್ರಧಾನಮಂತ್ರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಇಂತಹ ಕೃತ್ಯಗಳನ್ನು ಸ್ಪಷ್ಟವಾಗಿ ಖಂಡಿಸಬೇಕುʼ ಎಂದು ಹೇಳಿದರು.
ʼಕ್ರೈಸ್ತರು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಮತ್ತು ಮುಂದುವರಿಸುತ್ತಾರೆ. ಆದಾಗ್ಯೂ, ದೇಶದ ಕೆಲವು ಭಾಗಗಳಲ್ಲಿ ಧಾರ್ಮಿಕ ತಾರತಮ್ಯ ಹಾಗೂ ದಾಳಿಗಳು ಮುಂದುವರಿಯುತ್ತಿರುವುದು ಭಯ ಮತ್ತು ಅಶಾಂತಿಯನ್ನು ಉಂಟುಮಾಡುತ್ತಿದೆʼ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರೋಮನ್ ಕೆಥೊಲಿಕ್ ಚರ್ಚ್‌ನ ಪೋಪ್ ಲಿಯೋ-14 ಅವರು ಬಿಷಪ್‌ಗಳಿಗೆ ಕಳುಹಿಸಿದ್ದ ವಿಶೇಷ ಸಂದೇಶವನ್ನು ಭಾರತ ಮತ್ತು ನೇಪಾಳದ ಅಪೋಸ್ಟೋಲಿಕ್ ನೂನ್ಸಿಯೊ(ರಾಯಭಾರಿ) ಆಗಿರುವ ಆರ್ಚ್ ಬಿಷಪ್ ಲಿಯೋ ಪೋಲ್ಡೊ ಗಿರೆಲ್ಲಿ ಅವರು ಪ್ರಕಟಿಸಿದರು.
ಈ ಸಂದರ್ಭದಲ್ಲಿ ರಾಂಚಿಯ ಆರ್ಚ್ ವಿನ್ಸೆಂಟ್ ಐಂಡ್, ಹೈದರಾಬಾದ್‌ನ ಆರ್ಚ್ ಬಿಷಪ್ ಕಾರ್ಡಿನಲ್ ಆ್ಯಂಟನಿ ಪೂಲಾ,ಗೋವಾದ ಆರ್ಚ್ ಬಿಷಪ್ ಫೆಲಿಪ್ ನೆರಿ ಪೆರಾವೋ , ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೊ, ಸಿಬಿಸಿಐ ಉಪ ಪ್ರಧಾನ ಕಾರ್ಯದರ್ಶಿ ರೆವೆರೆಂಡ್ ಡಾ. ಸ್ಟೀಫನ್ ಅಲತ್ತರ್ ಸೇರಿದಂತೆ ಪ್ರಮುಖರಿದ್ದರು.
ಬಿಷಪ್‌ಗಳ ಸಮ್ಮೇಳನ:
► ಇಂದಿನಿಂದ(ಫೆ.4) ಆರು ದಿನಗಳ ಕಾಲ ಬೆಂಗಳೂರಿನ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯಲ್ಲಿ ಭಾರತದ ಕೆಥೊಲಿಕ್ ಬಿಷಪ್‌ಗಳ ಸಮ್ಮೇಳನ ಹಾಗೂ ಸಿಬಿಸಿಐ 37ನೇ ಸಾಮಾನ್ಯ ಸಭೆ ಆಯೋಜಿಸಲಾಗಿದ್ದು, ಮತಾಂತರ ಕಾನೂನು, ಕ್ರೈಸ್ತ ಸಮುದಾಯದ ಮೇಲಿನ ದಾಳಿ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ.
► ಬುಧವಾರ ಬೆಳಗ್ಗೆ ಈ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ಭಾರತ ಮತ್ತು ನೇಪಾಳದ ಅಪೋಸ್ಟೋಲಿಕ್ ನೂನ್ಸಿಯೊ(ರಾಯಭಾರಿ) ಆಗಿರುವ ಆರ್ಚ್‌ಬಿಷಪ್ ಲಿಯೋಪೋಲ್ಡೊ ಗಿರೆಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
► ರಾಷ್ಟ್ರ ಹಾಗೂ ಭಾರತದ ಸಾಂವಿಧಾನಿಕ ದೃಷ್ಟಿಕೋನಕ್ಕೆ ಚರ್ಚ್‌ನ ಸಾಕ್ಷಿ ಎಂಬ ವಿಷಯದಡಿಯಲ್ಲಿ ಸಭೆ ನಡೆಯಲಿದ್ದು, ಇದು ಸಾಂವಿಧಾನಿಕ ಮೌಲ್ಯಗಳಿಗೆ ಚರ್ಚ್‌ನ ಬದ್ಧತೆ ಮತ್ತು ದೇಶದ ಸಾಮಾಜಿಕ-ರಾಜಕೀಯ ಜೀವನದಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಸಿಬಿಸಿಐ ಅಧ್ಯಕ್ಷ ಆರ್ಚ್ ಬಿಷಪ್ ಆಂಡ್ರ್ಯೂಸ್ ತಾಝತ್ ಹೇಳಿದ್ದಾರೆ.
► ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಕೆ.ಎಂ.ಜೋಸೆಫ್, ಪ್ರಸಿದ್ಧ ವಿದ್ವಾಂಸ ಪ್ರೊ. ಡಿ.ಡೊಮಿನಿಕ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದು, ಫೆ.10ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಭೆಯ ನಿರ್ಣಯಗಳನ್ನು ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.







