ನಾನು, ಸಿಎಂ ಸಹೋದರರಂತೆ ಕೆಲಸ ಮಾಡುತ್ತಿಲ್ಲವೇ?: ಡಿ.ಕೆ.ಶಿವಕುಮಾರ್ ಪ್ರಶ್ನೆ

ಡಿ.ಕೆ.ಶಿವಕುಮಾರ್
ಬೆಂಗಳೂರು, ಡಿ.21: "ನನಗೆ ಕಾಂಗ್ರೆಸ್ಸಿನ ಯಾವುದೇ ನಾಯಕರ ಜತೆ ಭಿನ್ನಾಭಿಪ್ರಾಯಗಳಿಲ್ಲ. ನಾನು, ಸಿಎಂ ಒಟ್ಟಿಗೆ ಸಹೋದರರಂತೆ ಕೆಲಸ ಮಾಡುತ್ತಿಲ್ಲವೇ?" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವ ನಗರದ ತಮ್ಮ ನಿವಾಸದ ಬಳಿ ರವಿವಾರ ಬೆಳಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಯವರ ಆಪ್ತ ಬಳಗದವರನ್ನು ಭೇಟಿ ಮಾಡಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, "ಅವರಿಗೆ ಸಿಎಂ ಆಪ್ತರೇನು? ಅವರು ನನಗೂ ಆಪ್ತರೇ. ಅವರು ಯಾರಿಗೆ ಆಪ್ತರಿಲ್ಲ ಹೇಳಿ. ನಾನು ಸಿಎಂ ಆಪ್ತರಲ್ಲವೇ? ರಾಜಣ್ಣ ಅವರು ಜನತಾ ದಳದಲ್ಲಿದ್ದರು. ನಾನು ಕಾಂಗ್ರೆಸ್ ನವನು. ಅಂದು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಿದ್ದು ನಾನು. ಬೇಕಾದರೆ ಅವರನ್ನೇ ಕೇಳಿ. ಸಿಎಂಗೂ ಇದಕ್ಕೂ ಸಂಬಂಧವೇ ಇಲ್ಲ" ಎಂದರು.
ರಾಜಕೀಯ ಬೆಂಬಲಕ್ಕೆ ಕೆ.ಎನ್. ರಾಜಣ್ಣ ಹಾಗೂ ನೀವು ಭೇಟಿ ಮಾಡಿದ್ದೀರಿ ಎಂದಾಗ, "ನಾವು ಸಹೋದ್ಯೋಗಿಗಳು. ಅವರು ನಮ್ಮ ಜೊತೆ ಕೆಲಸ ಮಾಡಿರುವವರು. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯಗಳಿಲ್ಲ. ಕಳೆದ 16 ವರ್ಷಗಳಿಂದ, ಅವರು ನಮ್ಮ ಪಕ್ಷಕ್ಕೆ ಬಂದ ದಿನದಿಂದ ನನಗೂ ಮುಖ್ಯಮಂತ್ರಿಯವರಿಗೂ ಬಿನ್ನಾಭಿಪ್ರಾಯಗಳು ಏನಾದರೂ ಇದೆಯಾ? ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳು, ವಿರೋಧ ಪಕ್ಷಗಳು ಸೃಷ್ಟಿ ಮಾಡುತ್ತಿವೆ. ತಮಗೆ ಬೇಕಾದ ಆಹಾರ ಸೃಷ್ಟಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ರಾಜಕೀಯವಾಗಿ ಹೇಳಿಕೆ ಕೊಟ್ಟಿರುತ್ತಾರೆ. ಇದಕ್ಕೆ ಬೇಸರ ಮಾಡಿಕೊಳ್ಳಲು ಆಗುತ್ತದೆಯೇ? ಅಣ್ಣ-ತಮ್ಮಂದಿರೇ ಜಗಳ ಮಾಡುತ್ತಾರಂತೆ, ಇನ್ನು ನಮ್ಮದು ಯಾವ ಜಗಳ" ಎಂದರು.
"ಎಲ್ಲಾ ಕಾಂಗ್ರೆಸ್ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ನನ್ನ ಸ್ನೇಹಿತರು, ಸಹೋದ್ಯೋಗಿಗಳು, ಒಟ್ಟಿಗೆ ಇದ್ದೇವೆ. ನಾನಂತು ಯಾರ ಮೇಲೂ ಜಗಳ ಮಾಡಲು ಹೋಗಿಲ್ಲ. ಯಾವ ವಿಚಾರಕ್ಕೂ ಒಬ್ಬರ ಮೇಲೆ ಇನ್ನೊಬ್ಬರು ಇದುವರೆಗೂ ಹೇಳಿಕೆ ನೀಡಿಲ್ಲ. ದಾಖಲೆಗಳನ್ನು ತೆಗೆದು ನೋಡಿ. ವಿರೋಧ ಪಕ್ಷದವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಿದ್ದೇನೆಯೇ ಹೊರತು ನಾನಾಗಿಯೇ ಯಾರ ಮೇಲೂ ಹೇಳಿಕೆ ನೀಡಿಲ್ಲ. ನಾನಾಗಿಯೇ ಒಬ್ಬರ ಮೇಲಾದರೂ ಹೇಳಿಕೆ ನೀಡಿದ್ದರೆ ತಿಳಿಸಿ" ಎಂದು ಡಿಕೆಶಿ ಹೇಳಿದರು.
"ರಾಜಣ್ಣ ಅ ನಮ್ಮ ಶಾಸಕರು, ನಮ್ಮ ಜೊತೆ ಮಂತ್ರಿಯಾಗಿದ್ದವರು. ಸೌಹಾರ್ದಯುತ ಭೇಟಿ ಮಾಡುತ್ತೇವೆ. ಶನಿವಾರ ಸರಿಯಾಗಿ ಮಾತನಾಡಲು ಆಗಲಿಲ್ಲ. ಅದಕ್ಕೆ ಇಂದು (ರವಿವಾರ) ಸಹ ಭೇಟಿ ಮಾಡುತ್ತೇನೆ ಎಂದು ಹೇಳಿದ್ದೇನೆ. ರಾಜ್ಯಪಾಲರ ಕಾರ್ಯಕ್ರಮ ಇರುವ ಕಾರಣಕ್ಕೆ ಆನಂತರ ಭೇಟಿ ಮಾಡುತ್ತೇನೆ"ಎಂದರು.
ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ
ಬಿ.ಆರ್. ಸುದರ್ಶನ ಎಲ್ಲಾ ಗೊಂದಲಗಳನ್ನು ಬಗೆಹರಿಸಿ ಎಂದು ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, "ನನ್ನ ಪ್ರಕಾರ ಯಾವ ಗೊಂದಲವೂ ಇಲ್ಲ. ಗೊಂದಲ ಎಲ್ಲಿದೆ. ಗೊಂದಲ ಮಾಧ್ಯಮ ಹಾಗೂ ಬಿಜೆಪಿ ಸೃಷ್ಟಿ. ಅವರ ಪಕ್ಷದಲ್ಲಿ ಸಾಕಷ್ಟು ತೊಂದರೆಗಳಿವೆ ಅದಕ್ಕೆ ಮಾಡುತ್ತಿದ್ದಾರೆ. ಮಾಧ್ಯಮಗಳಿಗೂ ಸುದ್ದಿ ಬೇಕು. ಅದಕ್ಕೆ ದಿನಾ ತೋರಿಸುತ್ತಿದ್ದೀರಿ ಅಷ್ಟೇ" ಎಂದರು.
ಪರಮೇಶ್ವರ್ ಸಹ ಗೊಂದಲ ಬಗೆಹರಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ಕೇಳಿದಾಗ, "ನಾನು ಅವರ ವಕ್ತಾರನಲ್ಲ. ಅವರು ಬಹಳ ದೊಡ್ಡ ನಾಯಕರು ಉತ್ತರ ನೀಡುತ್ತಾರೆ" ಎಂದರು.
ಜನರ ಆಶೀರ್ವಾದವೇ ನನಗೆ ಆತ್ಮ ವಿಶ್ವಾಸ:
ಹೆಚ್ಚು ಆತ್ಮವಿಶ್ವಾಸ ಇರುವಂತೆ ಕಾಣುತ್ತಿದ್ದೀರಿ ಎಂದು ಕೇಳಿದಾಗ, "ನೀವೇ (ಮಾಧ್ಯಮಗಳ) ನನಗೆ ಆತ್ಮವಿಶ್ವಾಸ. ಅನವಶ್ಯಕ ಪ್ರಚಾರ ನೀಡುತ್ತಿದ್ದೀರಿ. ಜನರ ಆಶೀರ್ವಾದವೇ ನನಗೆ ಆತ್ಮವಿಶ್ವಾಸ" ಎಂದರು.
ಹೈಕಮಾಂಡ್ ನಿಂದ ಫೋನ್ ಕರೆ ಬರುವ ಮುಂಚೆಯೇ ಆತ್ಮವಿಶ್ವಾಸ ಕಾಣುತ್ತಿದೆ ಎಂದಾಗ, "ಈಗ ತಾನೇ ಹೈಕಮಾಂಡ್ ನಾಯಕರ ಜತೆ ಮಾತನಾಡಿದೆ. ಪರಿಷತ್ ಚುನಾವಣೆ ವಿಚಾರವಾಗಿ ನಾಲ್ಕು ಜನಕ್ಕೆ ಬಿ ಫಾರಂ ನೀಡುವ ವಿಚಾರ ಚರ್ಚೆ ನಡೆಸಿದೆ. ಹೆಸರನ್ನು ಘೋಷಿಸಿ ಎಂದು ಚರ್ಚೆ ನಡೆಸಿದೆ" ಎಂದರು.
ಹೈಕಮಾಂಡ್ ಭೇಟಿಗೆ ದಿನಾಂಕ ನಿಗದಿಯಾಗಿದೆಯೇ ಎಂದಾಗ, "ಎಲ್ಲಿಗೆ ಹೋದರು ರಾಜಕೀಯಕ್ಕೆ ಬರುತ್ತಿದ್ದೀರಿ. ರಸ್ತೆಗುಂಡಿ ವಿಚಾರ ಬಿಡಲಾಯಿತು. ಎಲ್ಲಾ ಗುಂಡಿ ಮುಚ್ಚಲಾಗಿದೆ. ನಮ್ಮ ಜಿಬಿಎ ಆಯುಕ್ತರು ಬೆಳಗ್ಗೆ ಸಂಜೆ ಓಡಾಡಿ ಕೆಲಸ ಮಾಡುತ್ತಿದ್ದಾರೆ ಅದನ್ನೂ ತೋರಿಸುತ್ತಿಲ್ಲ" ಎಂದರು.
ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ:
ದಿಲ್ಲಿ ಪ್ರಯಾಣದ ಬಗ್ಗೆ ಕೇಳಿದಾಗ, "ನದಿ ಜೋಡಣೆ ವಿಚಾರವಾಗಿ ಸಭೆ ಇರುವ ಕಾರಣಕ್ಕೆ ತೆರಳುತ್ತಿದ್ದೇನೆ. ಇದೇ ವೇಳೆ ನಗರಾಭಿವೃದ್ಧಿ ಸಚಿವರ ಭೇಟಿಗೆ ಅವಕಾಶ ಕೇಳಿದ್ದೇನೆ. ಮೆಟ್ರೋ ಸೇರಿದಂತೆ ಇತರ ಕೆಲಸಗಳಿಗೆ ಶೇ.50ರಷ್ಟು ಅನುದಾನ ನೀಡಬೇಕು ಎಂದು ಒತ್ತಾಯಿಸುತ್ತೇನೆ. ಏಕೆಂದರೆ ಕೇವಲ ಶೇ. 12-13 ರಷ್ಟು ಅನುದಾನ ನೀಡಿದರೆ ಸಾಲುವುದಿಲ್ಲ. ಮೆಟ್ರೋ ಅಡಿ ದೊಡ್ಡ ಯೋಜನೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಿಗದಿತ ಅವಧಿಯೊಳಗೆ ಮುಗಿಸಬೇಕಲ್ಲವೇ? ಡಬ್ಬಲ್ ಡೆಕ್ಕರ್ ಕೂಡ ಮಾಡುತ್ತಿದ್ದೇವೆ. ಹೊಸ ಮಾರ್ಗಗಳನ್ನು ವಿಸ್ತರಿಸಬೇಕಲ್ಲವೇ. ಹೊಸಕೋಟೆ, ಬಿಡದಿ ಮಾರ್ಗಗಳ ಬಗ್ಗೆ ಚರ್ಚಿಸಬೇಕಿದೆ. ಮಹದಾಯಿ, ಎತ್ತಿನಹೊಳೆ ವಿಚಾರವಾಗಿ ಅರಣ್ಯ ಸಚಿವರ ಬಳಿ ಮಾತನಾಡಬೇಕು. ಎತ್ತಿನಹೊಳೆಯ ಹೆಚ್ಚಿನ ಕೆಲಸ ಮುಗಿಸಿದ್ದೇವೆ. ತುಮಕೂರಿನವರೆಗೆ ನೀರು ತರಲಿಲ್ಲ ಎಂದರೆ ಜನ ಹೊಡೆಯುತ್ತಾರೆ. ಮೇಕೆದಾಟು ವಿಚಾರವಾಗಿ ಡಿಪಿಆರ್ ವರದಿ ಸಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ" ಎಂದರು.
ದ್ವೇಷ ಭಾಷಣ ತಡೆ ಮಸೂದೆಗೆ ತೆಲಂಗಾಣವೂ ಮುಂದಾಗಿರುವ ಬಗ್ಗೆ ಕೇಳಿದಾಗ, "ಇದು ಇಂದಿನ ಅಗತ್ಯ. ಏಕೆಂದರೆ ದ್ವೇಷ ಭಾಷಣ ಮೂಲಕ ಜನಸಾಮಾನ್ಯರಲ್ಲಿ ಅನಗತ್ಯ ಗೊಂದಲ ಉಂಟು ಮಾಡಲಾಗುತ್ತಿದೆ. ಜನರಲ್ಲಿ ಭಯ ಹಾಗೂ ಅವರ ನಡುವೆ ವಿಭಜನೆಗೆ ಕಾರಣವಾಗುತ್ತಿದೆ. ಸುಖಾಸುಮ್ಮನೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಅದಕ್ಕೆ ಇದನ್ನು ತರಲಾಗಿದೆ. ನಮ್ಮದು ಶಾಂತಿಯುತ ರಾಜ್ಯ" ಎಂದರು.
ಕೊಟ್ಟ ಮಾತನ್ನು ಕಾಂಗ್ರೆಸ್ ಸರ್ಕಾರ ಉಳಿಸಿಕೊಂಡಿದೆ
2025 ನೇ ವರ್ಷ ನಿಮಗೆ ತೃಪ್ತಿ ತಂದಿದೆಯೇ ಎಂದು ಕೇಳಿದಾಗ, "ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಅದಕ್ಕೆ ಸಂತೋಷವಿದೆ. ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ ಹೊರತು ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಗ್ಯಾರಂಟಿ ಯೋಜನೆಗಳ ಜೊತೆಗೆ ಪ್ರಣಾಳಿಕೆಯಲ್ಲಿ ನೀಡಿದ ಆಶೋತ್ತರಗಳನ್ನು ಈಡೇರಿಸಿದ್ದೇವೆ. ಪ್ರತಿಯೊಬ್ಬರ ಆರ್ಥಿಕ ಭದ್ರತೆ ಬಗ್ಗೆ ಒತ್ತು ನೀಡಿದ್ದೇವೆ" ಎಂದರು.







