ಅರ್ನಾಬ್ ಗೋಸ್ವಾಮಿ, ಅಮಿತ್ ಮಾಳವಿಯಾ ವಿರುದ್ಧದ ಎಫ್ಐಆರ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಟರ್ಕಿಯ ಇಸ್ತಾನ್ಬುಲ್ನ ಕಾಂಗ್ರೆಸ್ ಕಚೇರಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಕಚೇರಿ ಎಂದು ಬಿಂಬಿಸಿ ಟ್ವೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿಂದಿನ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಹಾಗೂ ಆ ಕುರಿತ ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ರಿಪಬ್ಲಿಕ್ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಕೋರಿ ಅಮಿತ್ ಮಾಳವಿಯಾ ಹಾಗೂ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಆದೇಶಿಸಿದೆ. ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪದಾಧಿಕಾರಿ ಶ್ರೀಕಾಂತ್ ಸ್ವರೂಪ್ ಬಿ ಎನ್ ನೀಡಿದ್ದ ದೂರಿನ ಆಧಾರದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 192 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು ಸೆಕ್ಷನ್ 352 (ಶಾಂತಿಭಂಗಕ್ಕೆ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇಸ್ತಾನ್ಬುಲ್ ಕಾಂಗ್ರೆಸ್ ಸೆಂಟರ್ನ ಚಿತ್ರವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಚೇರಿ ಎಂಬಂತೆ ಬಿಂಬಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಸಂಬಂಧ ಅಮಿತ್ ಮಾಳವೀಯ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ್ದ ಪೋಸ್ಟ್ ಹಾಗೂ ರಿಪಬ್ಲಿಕ್ ಟಿವಿ ಕಾರ್ಯಕ್ರಮದ ಡಿಜಿಟಲ್ ಆವೃತ್ತಿಯಲ್ಲಿ ಬಳಸಲಾಗಿದ್ದ ಚಿತ್ರ ಈ ವಿವಾದಕ್ಕೆ ಕಾರಣವಾಗಿತ್ತು.
ಈ ಪೋಸ್ಟ್ಗಳು ಸಾರ್ವಜನಿಕರನ್ನು ದಾರಿ ತಪ್ಪಿಸುವ, ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಹಾಗೂ ರಾಷ್ಟ್ರೀಯ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ಹೊಂದಿದ್ದವು ಎಂಬುದು ದೂರುದಾರರ ಆರೋಪಿಸಿದ್ದರು. 2025ರ ಮೇ 15ರಂದು ಪ್ರಸಾರವಾದ ರಿಪಬ್ಲಿಕ್ ಟಿವಿಯ ಡಿಜಿಟಲ್ ಆವೃತ್ತಿಯಲ್ಲಿ ಇಸ್ತಾನ್ಬುಲ್ನ ಕಟ್ಟಡವೊಂದರ ಸಂಬಂಧವಿಲ್ಲದ ಚಿತ್ರವನ್ನು ತಪ್ಪಾಗಿ ಸೇರಿಸಲಾಗಿತ್ತು ಎಂದು ಅರ್ನಬ್ ಗೋಸ್ವಾಮಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಡಿಜಿಟಲ್ ವಿಭಾಗದ ಕಿರಿಯ ಸಿಬ್ಬಂದಿಯಿಂದ ಈ ಚಿತ್ರ ಸೇರ್ಪಡೆಯಾಗಿದ್ದು, ಅದು ಮೂಲ ನೇರ ಪ್ರಸಾರದಲ್ಲಿ ಇರಲಿಲ್ಲ ಮತ್ತು ಆನ್ಲೈನ್ ಆವೃತ್ತಿಯಲ್ಲಿ ಸುಮಾರು ನಾಲ್ಕು ಸೆಕೆಂಡುಗಳ ಕಾಲ ಮಾತ್ರ ಕಾಣಿಸಿಕೊಂಡಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
ಈ ತಪ್ಪನ್ನು ಸರಿಪಡಿಸಿ, ಮೇ 20, 2025ರಂದು ವಾಹಿನಿಯು ತಿದ್ದುಪಡಿ ಪ್ರಕಟಣೆ ಹೊರಡಿಸಿ ವಿಷಾದ ವ್ಯಕ್ತಪಡಿಸಿತ್ತು ಎಂದು ಗೋಸ್ವಾಮಿ ಪರ ವಕೀಲರು ವಾದಿಸಿದ್ದರು. ಎಫ್ಐಆರ್ ದಾಖಲಿಸುವ ಮೊದಲು ಲಭ್ಯವಿದ್ದ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಿಲ್ಲ ಹಾಗೂ ತಮ್ಮ ವಿರುದ್ಧ ದಾಖಲಿಸಿರುವ ಅಪರಾಧಗಳ ಅಗತ್ಯ ಅಂಶಗಳು ಆರೋಪಗಳಲ್ಲಿ ವ್ಯಕ್ತವಾಗುವುದಿಲ್ಲ ಎಂದು ಗೋಸ್ವಾಮಿ ವಾದಿಸಿದ್ದರು.
ಅಮಿತ್ ಮಾಳವೀಯ ಅವರು 2025ರ ಮೇ 17ರಂದು ಎಕ್ಸ್ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡು, ಟರ್ಕಿಯಲ್ಲಿ ಕಾಂಗ್ರೆಸ್ ಪಕ್ಷದ ನೋಂದಾಯಿತ ಕಚೇರಿ ಇದೆಯೇ ಎಂದು ಪ್ರಶ್ನಿಸಿದ್ದರು. “ಕಾಂಗ್ರೆಸ್ ಪಕ್ಷಕ್ಕೆ ಟರ್ಕಿಯಲ್ಲಿ ನೋಂದಾಯಿತ ಕಚೇರಿ ಇದೆ ಎಂಬುದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣವೇನು ಎಂಬುದನ್ನು ರಾಹುಲ್ ಗಾಂಧಿ ವಿವರಿಸಬಹುದೇ? ಇದು ಹಲವು ದೃಷ್ಟಿಕೋನಗಳಿಂದ ವಿಚಿತ್ರ ಮತ್ತು ವಿವರಿಸಲಾಗದ ಸಂಗತಿಯಾಗಿದೆ. ಭಾರತಕ್ಕೆ ಇದರ ಬಗ್ಗೆ ತಿಳಿಯುವ ಹಕ್ಕಿದೆ. ನೆನಪಿಡಿ: ಶತ್ರುವಿನ ಸ್ನೇಹಿತನೂ ಶತ್ರುವೇ” ಎಂದು ಅವರು ಪೋಸ್ಟ್ನಲ್ಲಿ ಬರೆದಿದ್ದರು.
ನಂತರ ಚಿತ್ರದಲ್ಲಿದ್ದ ಕಟ್ಟಡವು ಇಸ್ತಾನ್ಬುಲ್ ಕಾಂಗ್ರೆಸ್ ಸೆಂಟರ್ ಆಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ ಎಂಬುದು ವಿವಾದವಾಗಿತ್ತು. ಟರ್ಕಿಯಲ್ಲಿ ಕಚೇರಿ ಹೊಂದಿರುವುದನ್ನು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕವೂ ನಿರಾಕರಿಸಿತ್ತು. ಈ ವಿವಾದದ ಬೆನ್ನಲ್ಲೇ ರಿಪಬ್ಲಿಕ್ ಟಿವಿ ತಿದ್ದುಪಡಿ ಪ್ರಕಟಣೆ ಹೊರಡಿಸಿತ್ತು. ಮತ್ತೊಂದೆಡೆ, ತಮ್ಮ ವಿರುದ್ಧದ ಎಫ್ಐಆರ್ ಕುರಿತು ಮಾಳವೀಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಮಾಳವೀಯ ಮತ್ತು ಗೋಸ್ವಾಮಿ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ 2025ರ ಮೇ 22ರಂದು ತಡೆ ನೀಡಿತ್ತು. ಇದೀಗ ಇಬ್ಬರೂ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಎಫ್ಐಆರ್ಗಳನ್ನು ರದ್ದುಪಡಿಸಿದೆ.






