ಬೆಂಗಳೂರು | ವಿದ್ಯಾರ್ಥಿಗಳಿಂದ ಸುಲಿಗೆ ಆರೋಪ :ಗೃಹ ರಕ್ಷಕ ದಳ ಸಿಬ್ಬಂದಿ ಬಂಧನ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ವಿದ್ಯಾರ್ಥಿಗಳ ಕೊಠಡಿಗೆ ನುಗ್ಗಿ ಸುಲಿಗೆ ಮಾಡಿದ್ದ ಆರೋಪದಡಿ ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರನ್ನು ಇಲ್ಲಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ನಗರದ ಪೊಲೀಸ್ ಠಾಣೆಯೊಂದರಲ್ಲಿ ನಿಯೋಜಿತವಾಗಿದ್ದ ಗೃಹ ರಕ್ಷಕ ದಳದ ಸುರೇಶ್ ಕುಮಾರ್ (40) ಎಂಬಾತ ಬಂಧಿತ ಆರೋಪಿ ಎಂದು ಗೊತ್ತಾಗಿದೆ.
ಇತ್ತೀಚಿಗೆ ಇಲ್ಲಿನ ಎಂಎಸ್ ರಾಮಯ್ಯ ನಗರದಲ್ಲಿರುವ ವಿದ್ಯಾರ್ಥಿಗಳ ಕೊಠಡಿಗೆ ನುಗ್ಗಿದ್ದ ಸುರೇಶ್ ಕುಮಾರ್, ತಾನು ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬೆದರಿಸಿ ಹಂತ ಹಂತವಾಗಿ 5ಸಾವಿರ ರೂ.ಗಳನ್ನು ಸುಲಿಗೆ ಮಾಡಿದ್ದ ಎನ್ನಲಾಗಿದೆ.
ತಕ್ಷಣ ಯುವತಿಯ ಸ್ನೇಹಿತ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದು, ಅದರ ಅನ್ವಯ ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ, ಸುರೇಶ್ ಕುಮಾರ್ನನ್ನು ವಶಕ್ಕೆ ಪಡೆದು ಸದಾಶಿವನಗರ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಸ್ನೇಹಿತ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಸದಾಶಿವನಗರ ಠಾಣೆ ಪೊಲೀಸರು ಆರೋಪಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.





