ಬೆಂಗಳೂರು | ನಟಿಯ ಕಾರಿನಿಂದ 24 ಲಕ್ಷ ರೂ.ಮೌಲ್ಯದ ವಸ್ತುಗಳ ಕಳ್ಳತನ ಪ್ರಕರಣ : ಆರೋಪಿ ಸೆರೆ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಚಿತ್ರನಟಿಯೊಬ್ಬರ ಕಾರಿನಿಂದ ಸುಮಾರು 24 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ನಟಿ ರುಕ್ಮಿಣಿ ವಿಜಯಕುಮಾರ್ ಎಂಬುವರು ನೀಡಿದ ದೂರಿನನ್ವಯ ಕ್ಯಾಬ್ ಚಾಲಕ ಮಹಮ್ಮದ್ ಮಸ್ತಾನ್ ಎಂಬುವನನ್ನು ಬಂಧಿಸಿ ಆತನಿಂದ 1,50,000 ರೂ. ಮೌಲ್ಯದ ಹ್ಯಾಂಡ್ಬ್ಯಾಗ್, 75000 ಮೌಲ್ಯದ ಪರ್ಸ್, ಎರಡು ಡೈಮಂಡ್ ರಿಂಗ್, ರೊಲೆಕ್ಸ್ ವಾಚ್ ಸೇರಿ ಸುಮಾರು 24 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಮೇ 11ರಂದು ಬೆಳಗ್ಗೆ ನಟಿ ರುಕ್ಮಿಣಿ ವಿಜಯಕುಮಾರ್ ಅವರು ವಾಕಿಂಗ್ಗೆ ತೆರಳಿದ್ದ ವೇಳೆ ಕಳ್ಳತನ ನಡೆದಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಗೇಟ್ ನಂ.18 ಬಳಿ ರುಕ್ಮಿಣಿ ತಮ್ಮ ಕಾರನ್ನು ನಿಲ್ಲಿಸಿದ್ದರು. ತಮ್ಮ ಕಾರಿನ ಒಳಗೆ ದುಬಾರಿ ಬೆಲೆಯ ಹ್ಯಾಂಡ್ಬ್ಯಾಗ್, ಪರ್ಸ್, ಎರಡು ಡೈಮಂಡ್ ರಿಂಗ್, ರೊಲೆಕ್ಸ್ ವಾಚ್ ಸೇರಿದಂತೆ ಹಲವಾರು ದುಬಾರಿ ಮೌಲ್ಯದ ವಸ್ತುಗಳನ್ನು ಇಟ್ಟುಹೋಗಿದ್ದರು. ಆದರೆ, ಅವರು ವಾಕಿಂಗ್ ಹೋಗುವಾಗ ತಮ್ಮ ಕಾರನ್ನು ಲಾಕ್ ಮಾಡುವುದನ್ನು ಮರೆತುಬಿಟ್ಟಿದ್ದರು. ಇದನ್ನು ಗಮನಿಸಿದ ಹತ್ತಿರಲ್ಲಿಯೇ ಇದ್ದ ಕ್ಯಾಬ್ ಚಾಲಕ ಮಹಮ್ಮದ್ ಮಸ್ತಾನ್ ಕಾರಿನೊಳಗಿನ ವಸ್ತುಗಳನ್ನು ಕದ್ದು ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಟಿ ರುಕ್ಮಿಣಿ ವಿಜಯಕುಮಾರ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಪಡೆದ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ಸಿಸಿಟಿವಿ ಹಾಗೂ ಇತರೆ ದೃಶ್ಯಾವಳಿಗಳನ್ನು ಆಧರಿಸಿದ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.







