ಬೆಂಗಳೂರು | ಮಹಿಳೆಯ ಹತ್ಯೆಗೈದು ಮೃತದೇಹ ಕಸದ ಲಾರಿಯಲ್ಲಿ ಎಸೆದಿದ್ದ ಪ್ರಕರಣ: ಆರೋಪಿ ಸೆರೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಮಹಿಳೆಯನ್ನು ಹತ್ಯೆಗೈದು ಮೃತದೇಹವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಸದ ಲಾರಿಯಲ್ಲಿ ಎಸೆದಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮೃತಳನ್ನು ಆಶಾ (25) ಎಂದು ಗುರುತಿಸಲಾಗಿದ್ದು, ಆಕೆಯನ್ನು ಹತ್ಯೆ ಮಾಡಿದ್ದ ಅಸ್ಸಾಂ ಮೂಲದ ಶಂಶುದ್ದೀನ್ (33) ಎಂಬಾತನನ್ನು ಬಂಧಿಸಲಾಗಿದೆ.
ಜೂ.29ರಂದು ಬೆಳಗ್ಗಿನ ಜಾವ 1:45ರ ಸುಮಾರಿಗೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಸದ ಲಾರಿಯಲ್ಲಿ ಆಶಾಳ ಮೃತದೇಹ ಪತ್ತೆಯಾಗಿತ್ತು. ಮನೆಗೆಲಸ ಮಾಡುತ್ತಿದ್ದ ಆಶಾ ಮತ್ತು ಭದ್ರತಾ ಸಿಬ್ಬಂದಿ ಕೆಲಸ ಮಾಡಿಕೊಂಡಿದ್ದ ಶಂಶುದ್ದೀನ್ ಒಟ್ಟಿಗೆ ಹುಳಿಮಾವು ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆಶಾಳಿಗೆ ಪತಿ ಮೃತಪಟ್ಟ ಬಳಿಕ ತನ್ನ ಇಬ್ಬರ ಮಕ್ಕಳೊಂದಿಗೆ ಶಂಶುದ್ದೀನ್ನೊಂದಿಗೆ ವಾಸವಿದ್ದಳು. ಇತ್ತ ಶಂಶುದ್ದೀನ್ ಸಹ ವಿವಾಹಿತನಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಅಸ್ಸಾಂನಲ್ಲಿ ವಾಸವಿದ್ದರು. ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾದ ಇಬ್ಬರೂ ಒಂದೇ ಮನೆ ಪಡೆದು ವಾಸವಿದ್ದರು. ಆಶಾ ಶಂಶುದ್ದೀನ್ ನಡುವೆ ಇತ್ತೀಚೆಗೆ ಪದೇ ಪದೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಜೂ.28ರ ಶನಿವಾರ ಜಗಳ ಅತಿರೇಕಕ್ಕೆ ಹೋದಾಗ ಶಂಶುದ್ದೀನ್ ಆಶಾಳ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಬಳಿಕ ಮಧ್ಯರಾತ್ರಿ ಮೃತದೇಹವನ್ನು ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಬಂದಿದ್ದ ಶಂಶುದ್ದೀನ್ ಕಸದ ಲಾರಿಯಲ್ಲಿಟ್ಟು ಪರಾರಿಯಾಗಿದ್ದ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಕ್ಕಪಕ್ಕದ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ತನಿಖೆಗಿಳಿದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಕೆಲವೇ ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿರುವುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡಿದ್ದಾರೆ.







