ಜಿಂದಾಲ್‌ಗೆ ಕಡಿಮೆ ಬೆಲೆಯಲ್ಲಿ ಭೂಮಿ ನೀಡುತ್ತಿರುವ ಸರಕಾರದ ತೀರ್ಮಾನದ ಹಿಂದೆ ದೊಡ್ಡ ಹಗರಣ ಅಡಗಿದೆ : ಅರವಿಂದ ಬೆಲ್ಲದ್

ಬೆಂಗಳೂರು : ಜಿಂದಾಲ್ ಕಂಪೆನಿಗೆ ಕಡಿಮೆ ಬೆಲೆಯಲ್ಲಿ ಸಾವಿರಾರು ಎಕರೆ ಖನಿಜಯುಕ್ತ ಭೂಮಿಯನ್ನು ನೀಡುತ್ತಿರುವ ಸರಕಾರದ ತೀರ್ಮಾನದ ಹಿಂದೆ ದೊಡ್ಡ ಹಗರಣ ಅಡಗಿದೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಂಪೆನಿ ಜೊತೆ ಏನು ಒಳ ಒಪ್ಪಂದ ಆಗಿದೆ? ಸರಕಾರದ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಕೇವಲ 20 ಕೋಟಿ ರೂ.ಗೆ ಜಿಂದಾಲ್ ಕಂಪೆನಿಗೆ ಕೊಡುತ್ತಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಗೋಲ್‍ಮಾಲ್ ಇದೆ ಎಂದು ಆರೋಪಿಸಿದರು.
ಜಿಂದಾಲ್ ಕಂಪೆನಿಯ ಈ ಭೂಮಿ 1970-71ರಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ಭೂಮಿ. ಆಗ ವಿಜಯನಗರ ಸ್ಟೀಲ್ ಲಿಮಿಟೆಡ್ ಕಂಪೆನಿಗೆ ಕೇಂದ್ರ ಸರಕಾರದಿಂದ ಸ್ಟೀಲ್ ಕಂಪೆನಿ ಮಾಡುವ ಉದ್ದೇಶದಿಂದ ಈ ಭೂಮಿ ತೆಗೆದುಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ದೇಶದಲ್ಲಿ ಖಾಸಗೀಕರಣದ ಸಂದರ್ಭದಲ್ಲಿ ಈ ಭೂಮಿಯನ್ನು ಕೇಂದ್ರ ಸರಕಾರವು ಕರ್ನಾಟಕ ಸರಕಾರಕ್ಕೆ ಕೊಟ್ಟಿತ್ತು. ಕರ್ನಾಟಕ ಸರಕಾರಕ್ಕೆ ಅತ್ಯಂತ ಕಡಿಮೆ ದರದಲ್ಲಿ ಅಂದರೆ 13 ಕೋಟಿ ರೂ. ಮೊತ್ತಕ್ಕೆ 9,600 ಎಕರೆ ಭೂಮಿಯನ್ನು ಕೇಂದ್ರ ಸರಕಾರ ಕೊಟ್ಟಿತ್ತು. ರಾಜ್ಯ ಸರಕಾರವು ಜೆಎಸ್‍ಡಬ್ಲ್ಯೂ ಸ್ಟೀಲ್ ಸಂಸ್ಥೆ(ಜಿಂದಾಲ್)ಗೆ ಸ್ಟೀಲ್ ಪ್ಲಾಂಟ್ ಮಾಡಲು 2006ರಲ್ಲಿ 2 ಸಾವಿರ ಎಕರೆ, 2007ರಲ್ಲಿ ಸುಮಾರು 1700 ಎಕರೆ ಭೂಮಿಯನ್ನು ಕೊಟ್ಟಿತ್ತು ಎಂದು ಅರವಿಂದ ಬೆಲ್ಲದ್ ತಿಳಿಸಿದರು.
ಲೀಸ್ ಕಮ್ ಸೇಲ್ ಡೀಡ್ ಅನ್ನು ಖಾಯಂ ಮಾಡುವ ವೇಳೆ ಆಗಿನ ಕಾಂಗ್ರೆಸ್ ಸರಕಾರವು ಪ್ರತಿ ಎಕರೆಗೆ 1.20 ಲಕ್ಷ ರೂಪಾಯಿಗೆ ಭೂಮಿ ನೋಂದಣಿ ಮಾಡುವ ನಿರ್ಧಾರ ತೆಗೆದುಕೊಂಡಾಗ ಬಿಜೆಪಿ ಸದಸ್ಯರು ಅದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಿದ್ದೆವು. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಲೂ ಕಡಿಮೆ ಬೆಲೆಗೆ ಖನಿಜಯುಕ್ತ ಈ ಭೂಮಿ ಕೊಡುವ ನಿರ್ಧಾರ ಬೇಡ ಎಂದು ನಿರ್ಧರಿಸಿದ್ದೆವು ಎಂದು ಅವರು ಹೇಳಿದರು.







