‘ಆಶಾ’ಗಳ ಮಾಸಿಕ ಗೌರವಧನ 15ಸಾವಿರ ರೂ.ನೀಡಲು ಆಗ್ರಹಿಸಿ ನ.17ರಿಂದ ಅನಿರ್ದಿಷ್ಟ ಹೋರಾಟ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರಕಾರದಿಂದ ಮಾಸಿಕ 15ಸಾವಿರ ರೂ. ನಿಗದಿತ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಿಳಿಸಿದೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ, ಸುಮಾರು 17-18 ವರ್ಷಗಳಿಂದ ಗ್ರಾಮೀಣ ಪ್ರದೇಶ ಹಾಗೂ ನಗರಗಳ ಕೊಳಚೆ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಆರೋಗ್ಯ ಸೇವೆ ಒದಗಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅವರ ದುಡಿಮೆಗೆ ತಕ್ಕ ಗೌರವಧನ ದೊರೆಯುತ್ತಿಲ. ಆಶಾ ಕಾರ್ಯಕರ್ತೆಯರಿಗೆ ಕೆಲಸದ ಸಮಯದ ಮಿತಿಯಿಲ್ಲ. ರಜೆ, ಹಬ್ಬಗಳನ್ನೂ ಲೆಕ್ಕಿಸದೆ ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವೀಡ್ ಸೋಂಕಿನ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿ ದುಡಿದಿದ್ದಾರೆ. ಆದರೆ, ಮಾಡಿದ ಕೆಲಸಕ್ಕೆ ತಕ್ಕಂತೆ ಪ್ರೋ ತ್ಸಾಹಧನ ಸಿಗುತ್ತಿಲ್ಲ. ಹಲವು ತಿಂಗಳ ಪ್ರೋತ್ಸಾಹಧನ ಬಾಕಿ ಉಳಿದಿದೆ. ಒಂಬತ್ತು ವರ್ಷಗಳಲ್ಲಿ ರಾಜ್ಯ ಸರಕಾರ ಆಶಾಗಳ ಗೌರವಧನವನ್ನು ಕೇವಲ 1,500ರೂ.ಮಾತ್ರ ಹೆಚ್ಚಿಸಿದೆ. ಆದರೆ, ಕೆಲಸದ ಹೊರೆ ನಿರಂತರವಾಗಿ ಹೆಚ್ಚುತ್ತಿದೆ. ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ನಿಗದಿತ ಗೌರವಧನ ನೀಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಕನಿಷ್ಠ 15ಸಾವಿರ ರೂ.ಗೌರವಧನ ನಿಗದಿಪಡಿಸಬೇಕು ಎಂದು ಸೋಮಶೇಖರ್ ಆಗ್ರಹಿಸಿದರು.
ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಹಿಂದಿನ ಮುಖ್ಯಮಂತ್ರಿ ಹೋರಾಟದ ಸಂದರ್ಭದಲ್ಲಿ 10 ಸಾವಿರ ರೂ. ಗೌರವಧನ ನೀಡುವ ಭರವಸೆ ಘೋಷಿಸಿದ್ದರೂ ಅದು ಈಡೇರಿಲ್ಲ. ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ನೀಡುವ ಹಣವನ್ನು ಆಶಾ ಕಾರ್ಯಕರ್ತೆಯರ ಗೌರವಧನದ ಭಾಗವೆಂದು ಪರಿಗಣಿಸುವ ಸರಕಾರದ ಧೋರಣೆ ಸರಿಯಲ್ಲ. ಗ್ಯಾರಂಟಿ ಯೋಜನೆ ಎಲ್ಲ ಅರ್ಹ ಮಹಿಳೆಯರಿಗೆ ದೊರೆಯುವ ಸಾಮಾನ್ಯ ಸೌಲಭ್ಯವಾಗಿದ್ದು, ಅದಕ್ಕೂ ಆಶಾ ಕಾರ್ಯಕರ್ತೆಯರ ದುಡಿಮೆಯ ಗೌರವಧನಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮಸ್ತ ಆ್ಯಪ್ ಮೂಲಕ ಮೊಬೈಲ್ ಕೆಲಸಗಳನ್ನು ಕಡ್ಡಾಯಗೊಳಿಸುವುದನ್ನು ಕೈಬಿಡಬೇಕು. ಇಲ್ಲವೇ ಮೊಬೈಲ್, ಹೆಚ್ಚುವರಿ ಪ್ರೋತ್ಸಾಹಧನ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ನಿವೃತ್ತರಾದ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಇಡಿಗಂಟು ತಕ್ಷಣ ಪಾವತಿಸಬೇಕು. ಆಶಾ ನಿಧಿ ಮೂಲಕ ಬರಬೇಕಾದ ಕೇಂದ್ರ ಸರಕಾರದ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಮಾರ್ಗಸೂಚಿಗೆ ವಿರುದ್ಧವಾಗಿ ಹಿಂಪಡೆದಿರುವ ಆಶಾ ಸುಗಮಕಾರರ ಸೇವೆಯನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು.
2024-25ನೇ ಸಾಲಿನಲ್ಲಿ ಹೆಚ್ಚಳವಾದ ಮಾಸಿಕ 1,500 ರೂ.ರಂತೆ ಒಂದು ವರ್ಷದ ಬಾಕಿ ಹಣ ನೀಡಬೇಕು. ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ 5 ಲಕ್ಷ ರೂ. ಇಡಿಗಂಟು ನೀಡಬೇಕು. ತೀವ್ರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ ಮೂರು ತಿಂಗಳ ಕಾಲ ನಿಗದಿತ ಗೌರವಧನ ಮತ್ತು ವಾಡಿಕೆಯ ಚಟುವಟಿಕೆಗಳ ಪ್ರೋತ್ಸಾಹಧನ ನೀಡಬೇಕು ಎಂದು ನಾಗಲಕ್ಷ್ಮಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಮಾ ಟಿ.ಸಿ., ಹನುಮೇಶ್ ಜಿ., ಫರಾನಾ, ಸುಮಿತ್ರಾ, ಪದ್ಮಾ ಉಪಸ್ಥಿತರಿದ್ದರು.






