ಆಶಾಗಳ ಬೇಡಿಕೆ ದೊಡ್ಡದೆನ್ನುವ ಸರಕಾರದ ಧೋರಣೆ ಕಾರ್ಮಿಕ ವಿರೋಧಿ : ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ

ಬೆಂಗಳೂರು : ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಬೇಡಿಕೆ ದೊಡ್ಡದು ಎಂದು ಹೇಳುತ್ತಿರುವ ರಾಜ್ಯ ಸರಕಾರದ ಧೋರಣೆ ಕಾರ್ಮಿಕ ವಿರೋಧಿಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಹಾಗೂ ಅತಿಥಿ ಶಿಕ್ಷಕರ ಬೇಡಿಕೆಗಳನ್ನೂ ಮುಂದಿಟ್ಟುಕೊಂಡು ಸ್ಕೀಮ್ ನೌಕರರನ್ನು ಪರಸ್ಪರ ಎತ್ತಿಕಟ್ಟುವ ಪ್ರಯತ್ನವನ್ನು ಸರಕಾರ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹಿಸಿದೆ.
ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಹಲವು ವರ್ಷಗಳಿಂದ ಆಶಾ ಕಾರ್ಯಕರ್ತೆಯರು ಮಾಸಿಕ 15 ಸಾವಿರ ರೂ.ಗೌರವಧನ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಜನವರಿ 2025ರಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ್ದ 10 ಸಾವಿರ ರೂ.ಗೌರವಧನದ ಭರವಸೆಯೂ ಈಡೇರಿಲ್ಲ. ಒಂಬತ್ತು ವರ್ಷಗಳಲ್ಲಿ ರಾಜ್ಯ ಸರಕಾರ ಹೆಚ್ಚಿಸಿರುವುದು ಕೇವಲ 1,500ರೂ.ಮಾತ್ರ ಎಂದು ಮಾಹಿತಿ ನೀಡಿದರು.
ಕೇರಳ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಸುಮಾರು 12 ಸಾವಿರ ರೂ. ನಿಗದಿತ ಗೌರವಧನ ನೀಡಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಜಿಎಸ್‍ಟಿ ಸಂಗ್ರಹಿಸುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಸಾಧ್ಯವಿಲ್ಲವೇ? ಒಂದೂವರೆ ವರ್ಷದ ಹಿಂದೆ ಕೇಂದ್ರ ಸರಕಾರ ಘೋಷಿಸಿದ್ದ 1,500 ರೂ. ಪ್ರೋ ತ್ಸಾಹಧನ ಹೆಚ್ಚಳ ಇನ್ನೂ ಜಾರಿಯಾಗಿಲ್ಲ. ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಆಶಾ ಕಾರ್ಯಕರ್ತೆಯರ ಪ್ರೋ ತ್ಸಾಹಧನವನ್ನು ಹೆಚ್ಚಿಸಿಲ್ಲ ಎಂದು ನಾಗಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಹಣಕಾಸಿನ ಕೊರತೆಯ ನೆಪ ಹೇಳುತ್ತಿದ್ದರೂ, ಮೂರು ವರ್ಷಗಳಲ್ಲಿ ಕಾರ್ಪೊ ರೇಟ್ ಕಂಪೆನಿಗಳಿಗೆ ಪ್ರೋತ್ಸಾಹದ ಹೆಸರಿನಲ್ಲಿ 11 ಸಾವಿರ ಕೋಟಿ ರೂ. ನೀಡಿದೆ. ಇದರ ಶೇ.5ರಷ್ಟು ಮೊತ್ತವನ್ನು ಕಡಿತಗೊಳಿಸಿದರೆ ರಾಜ್ಯದ 41 ಸಾವಿರ ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿರುವ 492 ಕೋಟಿ ರೂ. ಒದಗಿಸಬಹುದು. ಇದೇ ಅವಧಿಯಲ್ಲಿ ಜಾಹೀರಾತುಗಳಿಗೆ 500ಕೋಟಿ ರೂ.ಖರ್ಚು ಮಾಡಲಾಗಿದೆ. ಸುರಂಗ ಮಾರ್ಗ ಸೇರಿದಂತೆ ಬೃಹತ್ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ವ್ಯಯಿಸಲು ಸರಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಅತಿಥಿ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆರೋಗ್ಯ, ಪೌಷ್ಟಿಕತೆ ಹಾಗೂ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ಇವರೆಲ್ಲರೂ ಕಡಿಮೆ ಗೌರವಧನಕ್ಕೆ ದುಡಿಯುತ್ತಿರುವ ಕಾರ್ಮಿಕರಾಗಿದ್ದು, ಒಬ್ಬರ ಬೇಡಿಕೆಯನ್ನು ಮತ್ತೊಬ್ಬರ ಸಂಕಷ್ಟದೊಂದಿಗೆ ಹೋಲಿಸಿ ನಿರಾಕರಿಸುವುದು ಸರಿಯಲ್ಲ. ಎಲ್ಲ ವಿಭಾಗದ ನೌಕರರಿಗೂ ನ್ಯಾಯಯುತ ವೇತನ ನೀಡುವುದು ಸರಕಾರದ ಜವಾಬ್ದಾರಿ ಎಂದು ಅವರು ನುಡಿದರು.
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಾಗರಿಕರು, ಸಾಹಿತಿಗಳು, ಬುದ್ಧಿಜೀವಿಗಳು, ರೈತರು, ವಿದ್ಯಾರ್ಥಿಗಳು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳು ನೈತಿಕ ಹಾಗೂ ಆರ್ಥಿಕ ಬೆಂಬಲ ನೀಡುತ್ತಿವೆ. ಆದರೆ ಯಾವುದೇ ರಾಜಕೀಯ ಪಕ್ಷಗಳಿಂದ ವಸ್ತುರೂಪದ ಅಥವಾ ಆರ್ಥಿಕ ನೆರವು ಸ್ವೀಕರಿಸುವುದಿಲ್ಲ ಎಂದು ಸಂಘ ಸ್ಪಷ್ಟಪಡಿಸಿದೆ. ರಾಜಕೀಯ ಪಕ್ಷಗಳು ಸರಕಾರಗಳ ಮೇಲೆ ಒತ್ತಡ ಹೇರಿ ಬೇಡಿಕೆಗಳ ಈಡೇರಿಕೆಗೆ ಸಹಕರಿಸಬೇಕು. ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಫ್ರೀಡಂಪಾರ್ಕ್‍ನಲ್ಲಿ ಅಹೋರಾತ್ರಿ ಅನಿರ್ದಿಷ್ಟಾ ವಧಿ ಹೋರಾಟ ಮುಂದುವರಿಯಲಿದೆ ಎಂದು ನಾಗಲಕ್ಷ್ಮಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಸೋಮಶೇಖರ್, ಪದಾಧಿಕಾರಿಗಳಾದ ರಮಾ ಟಿ.ಎಸ್, ಹನುಮೇಶ್ ಜಿ, ಸಂಧ್ಯಾ ಸೇರಿದಂತೆ ಹಲವರು ಭಾಗವಹಿಸಿದ್ದರು.






