ಘನತ್ಯಾಜ್ಯ ನಿರ್ವಹಣಾ ಟೆಂಡರ್; ಉನ್ನತ ಮಟ್ಟದ ಸಮಿತಿ ಒತ್ತಡಗಳಿಗೆ ಮಣಿಯದೆ ವರದಿ ಸಲ್ಲಿಸಬೇಕು : ಆರ್.ಅಶೋಕ್

ಬೆಂಗಳೂರು : ‘ಘನತ್ಯಾಜ್ಯ ನಿರ್ವಹಣಾ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸಬೇಕು’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮನವಿ ಮಾಡಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘39,437ಕೋಟಿ ರೂ.ಮೊತ್ತದ ಘನತ್ಯಾಜ್ಯ ನಿರ್ವಹಣಾ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ಪತ್ರ ಬರೆದಿದ್ದೇನೆ. ಇದು ಕೇವಲ ಒಂದು ಟೆಂಡರ್ ವಿಚಾರವಲ್ಲ, ಬೆಂಗಳೂರಿನ ಭವಿಷ್ಯ, ತೆರಿಗೆದಾರರ ಹಣ ಮತ್ತು ಸಾರ್ವಜನಿಕ ವಿಶ್ವಾಸದ ಪ್ರಶ್ನೆಯಾಗಿದೆ’ ಎಂದು ಉಲ್ಲೇಖಿಸಿದ್ದಾರೆ.
‘ಸತ್ಯ, ಪಾರದರ್ಶಕತೆ ಮತ್ತು ಜನಹಿತದ ಪರವಾಗಿ ನಿಲ್ಲುವುದು ಸಮಿತಿಯ ಜವಾಬ್ದಾರಿ. ಯಾವುದೇ ಪ್ರಭಾವ, ಒತ್ತಡ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ವಾಸ್ತವಾಂಶಗಳ ಆಧಾರದ ಮೇಲೆ ವರದಿ ನೀಡಬೇಕು. ಬೆಂಗಳೂರು ನಗರದ ಜನರ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ಅವಕಾಶ ಸಮಿತಿಯ ಮುಂದಿದೆ. ನೆನಪಿರಲಿ, ಕರ್ನಾಟಕದ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ’ ಎಂದು ಅವರು ಎಚ್ಚರಿಸಿದ್ದಾರೆ.






