ಹಲ್ಲೆ ಪ್ರಕರಣ | ಅನಂತ್ ಕುಮಾರ್ ಹೆಗಡೆಗೆ ನೋಟಿಸ್, ಗನ್‍ಮ್ಯಾನ್, ಚಾಲಕನ ಬಂಧನ

ಬೆಂಗಳೂರು : ಕಾರು ಓವರ್ ಟೇಕ್ ಮಾಡಿದ್ದಕ್ಕೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತವರ ಬೆಂಬಲಿಗರು ಸೇರಿ ನಾಲ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ದಾಬಸ್‍ಪೇಟೆ ಠಾಣಾ ಪೊಲೀಸರು, ಹೆಗಡೆ ಅವರ ಗನ್‍ಮ್ಯಾನ್ ಮತ್ತು ಚಾಲಕನನ್ನು ಬಂಧಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಅನಂತ್ ಕುಮಾರ್ ಹೆಗಡೆಗೆ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಹಲ್ಲೆಗೊಳಗಾದವರ ಪೈಕಿ ಓರ್ವ ಸೈಫ್ ಖಾನ್ ಎಂಬವರು ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿದ್ದು, ಅನಂತ್ ಕುಮಾರ್ ಹೆಗಡೆ ಅವರ ಕಾರಿನ ಚಾಲಕ ಮಹೇಶ್, ಗನ್‍ಮ್ಯಾನ್ ಶ್ರೀಧರ್ ಎಂಬುವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೂ ನೋಟಿಸ್ ಕೊಟ್ಟಿದ್ದೇವೆ. ಕಾನೂನು ಪ್ರಕಾರ ತನಿಖೆ ನಡೆಯುತ್ತದೆ. ಅವರು ತನಿಖೆಗೆ ಸಹಕರಿಸಬೇಕು ಅಷ್ಟೇ ಎಂದು ಸಿ.ಕೆ.ಬಾಬಾ ಹೇಳಿದ್ದಾರೆ.
ನೆಲಮಂಗಲ ತಾಲೂಕು ಹಳೇ ನಿಜಗಲ್‍ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂ.23ರ ಸೋಮವಾರ ಮಧ್ಯಾಹ್ನ 3:40ರ ಸುಮಾರಿಗೆ ತಮ್ಮ ಕಾರನ್ನು ಓವರ್ ಟೇಕ್ ಮಾಡಿದ ವಿಚಾರಕ್ಕೆ ಅನಂತ್ ಕುಮಾರ್ ಹೆಗಡೆ ಅವರ ಗನ್ ಮ್ಯಾನ್ ಮತ್ತು ಚಾಲಕ ಸೇರಿದಂತೆ ನಾಲ್ವರು ಸೇರಿಕೊಂಡು ಹಲ್ಲೆ ಮಾಡಿದ್ದರು. ಈ ಘಟನೆಯಲ್ಲಿ ಸಲ್ಮಾನ್, ಸೈಫ್‍ಖಾನ್, ಇಲಿಯಾಜ್ ಖಾನ್, ಗುಲಷಿರ್ ಉನ್ನಿಸಾ ಹಲ್ಲೆಗೊಳಗಾಗಿದ್ದರು.





