ಬೆಂಗಳೂರು : ವೃದ್ಧರನ್ನೇ ಗುರಿಯಾಗಿಸಿಕೊಂಡು ಎಟಿಎಂ ಯಂತ್ರಗಳ ಬಳಿ ವಂಚನೆ: ಮೂವರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ವೃದ್ಧರನ್ನು ಗುರಿಯಾಗಿಸಿಕೊಂಡು ಎಟಿಎಂ ಯಂತ್ರಗಳ ಬಳಿ ವಂಚಿಸುತ್ತಿದ್ದ ಆರೋಪದಡಿ ಮೂವರನ್ನು ಪುಲಿಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಭಾರತ ಮೂಲದ ನಯಾಝ್, ಸುಧಾಂಶು ಹಾಗೂ ರಝೀಬ್ ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಜನಸಂದಣಿ ಕಡಿಮೆ ಪ್ರದೇಶಗಳಲ್ಲಿರುವ ಎಟಿಎಂಗಳ ಬಳಿ ಇರುತ್ತಿದ್ದ ಆರೋಪಿಗಳು, ಹಣ ಡ್ರಾ ಮಾಡುವ ವೃದ್ಧರು ನೆರವು ಕೇಳಿದಾಗ ಅವರಿಂದ ಡೆಬಿಟ್ ಕಾರ್ಡ್ ಹಾಗೂ ಪಿನ್ ಕೇಳಿ ಪಡೆದುಕೊಳ್ಳುತ್ತಿದ್ದರು. ಆದರೆ, ತಾವು ಮೊದಲೇ ಸಿದ್ಧವಿಟ್ಟುಕೊಂಡ ನಕಲಿ ಡೆಬಿಟ್ ಕಾರ್ಡ್ ಅನ್ನು ಎಟಿಎಂ ಯಂತ್ರದಲ್ಲಿ ಹಾಕಿ ಪಿನ್ ನಮೂದಿಸುತ್ತಿದ್ದರು.
ಆದರೆ, ಹಣ ಬರದಿದ್ದಾಗ ತಾಂತ್ರಿಕ ಸಮಸ್ಯೆಯ ನೆಪ ಹೇಳಿ ಕಳುಹಿಸುತ್ತಿದ್ದರು. ಬಳಿಕ ತಾವು ಕಳವು ಮಾಡುತ್ತಿದ್ದ ಅಸಲಿ ಡೆಬಿಟ್ ಕಾರ್ಡ್ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು. ಆರೋಪಿಗಳ ಪೈಕಿ ಸುಧಾಂಶು ಮತ್ತು ರಝೀಬ್ ತಮ್ಮ ತಮ್ಮ ಪತ್ನಿಯೊಂದಿಗೆ ಪ್ರವಾಸ ಕೈಗೊಂಡು ವಿಲಾಸಿ ಜೀವನ ನಡೆಸಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.





