ರಘುನಾಥ ಚ.ಹ.ಗೆ ‘ಕುವೆಂಪು ಚಿರಂತನ’, ಇಂದೂಧರ ಹೊನ್ನಾಪುರ ‘ಕುವೆಂಪು ಅನಿಕೇತನ’ ಪ್ರಶಸ್ತಿ

ಬೆಂಗಳೂರು : ಕನ್ನಡ ಸಂಘರ್ಷ ಸಮಿತಿ 2026ನೇ ಸಾಲಿಗೆ ನೀಡುವ ‘ಕುವೆಂಪು ಚಿರಂತನ’ ಪ್ರಶಸ್ತಿಗೆ ಪತ್ರಕರ್ತ ರಘುನಾಥ ಚ.ಹ. ಹಾಗೂ ‘ಕುವೆಂಪು ಅನಿಕೇತನ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಹಾಗೂ ‘ಕುವೆಂಪು ಯುವಕವಿ’ ಪ್ರಶಸ್ತಿಗೆ ಯುವ ಕವಯತ್ರಿ ಸಂಘಮಿತ್ರೆ ನಾಗರಘಟ್ಟ ಆಯ್ಕೆಯಾಗಿದ್ದಾರೆ.
ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಕುವೆಂಪು ಚಿರಂತನ ಪ್ರಶಸ್ತಿಯು ನಗದು ಪುರಸ್ಕಾರ 10ಸಾವಿರ ರೂ., ಕುವೆಂಪು ಅನಿಕೇತನ ಪ್ರಶಸ್ತಿಯು 5 ಸಾವಿರ ರೂ., ಯುವಕವಿ ಪ್ರಶಸ್ತಿಯು 2ಸಾವಿರ ರೂ. ನಗದನ್ನು ಹೊಂದಿದ್ದು, ಪುರಸ್ಕಾರದ ಜೊತೆಗೆ ಪ್ರಶಸ್ತಿ ಫಲಕ ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಜ.18ರ ಬೆಳಗ್ಗೆ 10 ಗಂಟೆಗೆ ನಗರದ ಚಾಮರಾಜಪೇಟೆ, ಕಸಾಪದ ಕುವೆಂಪು ಸಭಾಂಗಣದಲ್ಲಿ ಸಮಿತಿ ಆಯೋಜಿಸಿರುವ ಕುವೆಂಪು ಹಾಗೂ ಬೇಂದ್ರೆ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷತೆಯನ್ನು ಕನ್ನಡ ಹೋರಾಟಗಾರ ರಾಮಣ್ಣ ಎಚ್.ಕೋಡಿಹೊಸಹಳ್ಳಿ ವಹಿಸಲಿದ್ದು, ಪ್ರಾಧ್ಯಾಪಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಉಪನ್ಯಾಸ ನೀಡಲಿದ್ದು, ವೈಚಾರಿಕ ಕೃತಿ ಆಯ್ಕೆ ಕುರಿತು ಕನ್ನಡ ಸಾಹಿತ್ಯ ವಿಮರ್ಶಕ ಎಚ್.ದಂಡಪ್ಪ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.







