ಪತ್ರಕರ್ತರ ಸಂಘಗಳ ವಿಭಜನೆಯಿಂದ, ಬೇಡಿಕೆ ಈಡೇರಿಸುವಲ್ಲಿ ಹಿನ್ನಡೆ : ಆಯೇಷಾ ಖಾನಂ

ಬೆಂಗಳೂರು : ರಾಜ್ಯದಲ್ಲಿ ಅನೇಕ ಪತ್ರಕರ್ತರ ಸಂಘಗಳಿದ್ದು, ಅವೆಲ್ಲವೂ ವಿಭಜನೆಯಾಗಿವೆ. ಇದರಿಂದ ಪತ್ರಕರ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಹಿನ್ನಡೆಯಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಆಯೋಜಿಸಿದ್ದ ‘ಪತ್ರಕರ್ತರ ಸವಾಲುಗಳು’ ಎಂಬ ಅಂತರ್ ರಾಜ್ಯಮಟ್ಟದ ಸೆಮಿನಾರ್ ನಲ್ಲಿ ಮಾತನಾಡಿದ ಅವರು, ಪತ್ರಕರ್ತರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಪತ್ರಕರ್ತ ಸಂಘಗಳು ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.
ರಾಜ್ಯ ಸರಕಾರ ಪತ್ರಕರ್ತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಾಧ್ಯಮ ಅಕಾಡೆಮಿಯ ಮೂಲಕ ಪತ್ರಕರ್ತರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಪತ್ರಕರ್ತರ ಎಲ್ಲಾ ಬೇಡಿಕೆಗಳನ್ನು ಒಮ್ಮೆಲೇ ಈಡೇರಿಸಲು ಸಾಧ್ಯವಿಲ್ಲ. ಹಂತಹಂತವಾಗಿ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ. ಈಗ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸುಗಳನ್ನು ಸರಕಾರ ವಿತರಣೆ ಮಾಡಿದೆ ಎಂದು ಆಯೇಷಾ ಖಾನಂ ಹೇಳಿದರು.
ಪತ್ರಕರ್ತರಾಗಿ ನಮ್ಮ ಕೆಲಸಗಳನ್ನು ನಾವು ಮಾಡಬೇಕು, ಹಾಗೆಯೇ ನಮ್ಮ ಹಕ್ಕುಗಳಿಗೆ ನಾವು ಹೋರಾಟವನ್ನೂ ಮಾಡಬೇಕು. ವಾಕ್ ಮತ್ತು ಅಭಿವ್ಯಕ್ತ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹಾಗೂ ನಮ್ಮ ಹಕ್ಕುಗಳಿಗೆ ಹೋರಾಟವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಯುವ ಪತ್ರಕರ್ತರು ಮುಂದೆ ಬರಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್‍ನ ಉಪಾಧ್ಯಕ್ಷ ಉಪೇಂದ್ರ ಸಿಂಗ್ ರಾಥೋರ್, ದಕ್ಷಿಣ ಭಾರತ ಸಂಘದ ಸಂಚಾಲಕಿ ಕೆ. ಶಾಂತಕುಮಾರಿ, ಕೇರಳದ ಸಿನೀಯರ್ ಜರ್ನಲಿಸ್ಟ್ ಫೋರಂನ ಕಾರ್ಯದರ್ಶಿ ವಿಜಯ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.







