ಎಲ್ಲರನ್ನೂ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಭಾಷೆ ಕನ್ನಡ : ಬೈರತಿ ಸುರೇಶ್
ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ

ಬೆಂಗಳೂರು : ಯಾವುದೇ ಭೇದ-ಭಾವವಿಲ್ಲದೇ ಎಲ್ಲಾ ಭಾಷಿಕರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಗುಣ ಕನ್ನಡಿಗರದ್ದಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಭಾಗಿತ್ವದಲ್ಲಿ ನೀಡಲಾಗುವ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಮತ್ತು ಡಾ.ಸರಜೂ ಕಾಟ್ಕರ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಹೊರ ರಾಜ್ಯಗಳು ಮತ್ತು ಹೊರ ದೇಶಗಳಿಂದ ನಮ್ಮ ರಾಜ್ಯಕ್ಕೆ ಅಸಂಖ್ಯಾತ ಜನರು ಬರುತ್ತಾರೆ. ಇವರಲ್ಲಿ ಬಹುತೇಕ ಜನರು ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಮತ್ತು ಪ್ರೀತಿಗಳಿಗೆ ಮಾರು ಹೋಗಿ ತಮ್ಮ ತಾಯ್ನಾಡಿಗೆ ಹಿಂದಿರುಗಲು ಹಿಂದೇಟು ಹಾಕುತ್ತಾರೆ. ಇದು ನಾವು ಅನ್ಯ ಭಾಷಿಕರಿಗೆ ನೀಡುವ ಗೌರವ ಎಂದು ಅವರು ಬಣ್ಣಿಸಿದರು.
ನಮ್ಮ ಕನ್ನಡ ಇದು ಮಾನವನನ್ನು ಮಾನವನಂತೆ ಕಾಣುವ ವಿಶ್ವದ ಏಕೈಕ ಭಾಷೆಯಾಗಿದೆ. ಸಾಹಿತ್ಯ, ಸಂಸ್ಕಾರ, ಪರಸ್ಪರ ಗೌರವ ಹೀಗೆ ಎಲ್ಲವನ್ನೂ ಒಳಗೊಳ್ಳುವ, ಎಲ್ಲರೊಡನೆ ಬೆರೆತು ಜೀವಿಸುವ ಮನಸ್ಥಿತಿಯಲ್ಲಿ ಬೆಳೆದವರು ನಾವು ಕನ್ನಡಿಗರು. ಮನುಷ್ಯತ್ವ ಎಂಬುದು ನಿರಂತರವಾಗಿ ಪ್ರವಹಿಸುವ ನದಿ ಕನ್ನಡ ಭಾಷೆಯಾಗಿದೆ ಎಂದರು.
ಬಿಎಂಟಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಜೊತೆಗೆ, ಕನ್ನಡನಾಡಿನ ಸಂಸ್ಕೃತಿಯನ್ನು ಪೋಷಿಸಿ, ಪ್ರೋತ್ಸಾಹಿಸುವಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೈಗೊಂಡ ಕನ್ನಡೀಕರಣದ ನೂತನ ಮಾದರಿ ಕ್ರಮವೇ ನೃಪತುಂಗ ಸಾಹಿತ್ಯ ಪ್ರಶಸ್ತಿಯ ದತ್ತಿ ನಿಧಿಯಾಗಿದೆ. ಇದು ಒಂದು ನಿರ್ದಿಷ್ಟ ಕೃತಿಗೆ ನೀಡುವ ಪ್ರಶಸ್ತಿಯಲ್ಲ; ಬದಲಾಗಿ ಲೇಖಕರೊಬ್ಬರ ಸಮಗ್ರ ಸಾಹಿತ್ಯ ಕೊಡುಗೆಯನ್ನು ಪರಿಗಣಿಸಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದ ದಿಗ್ಗಜರನ್ನು ಗೌರವಿಸಿ ಕನ್ನಡ ಸಾಹಿತ್ಯವನ್ನು ಚಿರಂತನಗೊಳಿಸುವ ಕೆಲಸವನ್ನು ಬಿಎಂಟಿಸಿ ಮಾಡುತ್ತಿದೆ. ಈ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿರುವುದು ಸ್ವಾಗತಾರ್ಹ ಎಂದು ಬೈರತಿ ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ. ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಕವನ ಎಂದಿಗಿಂತಲೂ ಇಂದು ಪ್ರಸ್ತುತವಾಗಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ– ಕನ್ನಡಿಗರು ಎಲ್ಲೇ ಇದ್ದರೂ, ಎಂತಹ ಪರಿಸ್ಥಿತಿಯಲ್ಲಿದ್ದರೂ ತಮ್ಮ ಕನ್ನಡತನವನ್ನು ಮರೆಯಬಾರದು ಎಂಬುದು ಇದರ ಆಶಯವಾಗಿದೆ ಎಂದರು.






