ರೈತರಿಂದಲೇ ನೇರವಾಗಿ ಮೆಕ್ಕೆಜೋಳ ಖರೀದಿಸಿ ಡಿಸ್ಟಲರಿಗಳಿಗೆ ಸರಬರಾಜು ಮಾಡುವಂತೆ ಆದೇಶ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ(ಕೆಎಸ್ಸಿಎಂಎಫ್) ಸಂಸ್ಥೆಯು ರೈತರಿಂದ ನೇರವಾಗಿ ಖರೀದಿಸಿ ಡಿಸ್ಟಲರಿಗಳಿಗೆ ಸರಬರಾಜು ಮಾಡುವಂತೆ ಸರಕಾರ ರವಿವಾರ ಆದೇಶ ಹೊರಡಿಸಿದೆ.
ಧಾನ್ಯ ಆಧಾರಿತ ಎಥನಾಲ್ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಮೊದಲು ತ್ರೈಮಾಸಿಕದಲ್ಲಿ(2025 ನವೆಂಬರ್ 25ರಿಂದ 2026 ಜನವರಿ 26ರವರೆಗೆ) ಒಟ್ಟು 44,895 ಮೆಟ್ರಿಕ್ ಟನ್ ಮೆಕ್ಕೆಜೋಳ ಅಗತ್ಯವಿದ್ದು, ಅದರ ಶೇ.50ರಷ್ಟು ಅಂದರೆ 22,446 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ಪಿಎಸಿಎಸ್/ಟಿಎಪಿಸಿಎಂಎಸ್ ಸಂಸ್ಥೆಗಳ ಮೂಲಕ ಖರೀದಿಸಿ ಡಿಸ್ಟಿಲರಿಗಳ ಗೋದಾಮುಗಳಿಗೆ ಸರಬರಾಜು ಮಾಡುವಂತೆ ಕೆಎಸ್ಸಿಎಂಎಫ್ಗೆ ಸೂಚನೆ ನೀಡಲಾಗಿದೆ.
ಪ್ರತಿ ರೈತರಿಂದ ನೇರವಾಗಿ ಗರಿಷ್ಟ 5 ಕ್ವಿಂಟಾಲ್ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್ಗೆ 2,400 ರೂ.ನಂತೆ ಖರೀದಿಸಬೇಕು ಮತ್ತು ಡಿಸ್ಟಿಲರಿಗಳ ಸಮೀಪದ ಪಿಎಸಿಎಸ್ಗಳ ಮೂಲಕ ಖರೀದಿಸಲು ಆದ್ಯತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಖರೀದಿದಾರ ಡಿಸ್ಟಿಲರಿಗಳಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಬೇಕು ಎಂದು ತಿಳಿಸಲಾಗಿದೆ.
ಖರೀದಿ ಪ್ರಕ್ರಿಯೆಗೆ ಎನ್ಇಎಂಎಲ್ ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರಕಾರದ ಎಫ್ಆರ್ಯುಐಟಿಎಸ್ ಪೋರ್ಟಲ್ ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ಡಿಸೆಂಬರ್ 1ರಿಂದ ಮೂರು ದಿನಗಳವರೆಗೆ ರೈತರ ನೋಂದಣಿ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೇಳಲಾಗಿದೆ.
ಮೂರು ದಿನಗಳ ನಂತರದಲ್ಲಿ ರೈತರ ನೋಂದಣಿ ಹಾಗೂ ಖರೀದಿ ಎರಡೂ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ನಿರ್ವಹಿಸಬೇಕು. ಧಾನ್ಯ ಹಾಗೂ ಕಾಕಂಬಿ ಆಧಾರಿತ ಡಿಸ್ಟಿಲರಿಗಳು ಬೇಡಿಕೆ ಸಲ್ಲಿಸಿದಲ್ಲಿ, ಅವುಗಳಿಗೆ ಸಂಬಂಧಿಸಿದಂತೆ, ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಕೆಎಸ್ಸಿಎಂಎಫ್ ಮುಂದುವರೆಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಖರೀದಿ ಪ್ರಕ್ರಿಯೆಗೆ ತಗಲುವ ಪ್ರಾಸಂಗಿಕ ವೆಚ್ಚ, ಎನ್ಇಎಂಎಲ್ ಸಂಸ್ಥೆಯ ಸೇವಾ ವೆಚ್ಚ ಹಾಗೂ ಇತರೆ ವೆಚ್ಚಗಳನ್ನು ಕೆಎಸ್ಸಿಎಂಎಫ್ಗೆ ರಾಜ್ಯ ಸರಕಾರದಿಂದ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳು, ಸಹಕಾರ ಇಲಾಖೆಯ ಜಿಲ್ಲಾ ನಿಬಂಧಕರು ಹಾಗೂ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಖರೀದಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಸರಕಾರದ ಅಧೀನ ಕಾರ್ಯದರ್ಶಿ ಜಿ.ಎನ್.ಧನಲಕ್ಷ್ಮೀ ಆದೇಶದಲ್ಲಿ ತಿಳಿಸಿದ್ದಾರೆ.







