ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಿದ ಬೆಂಗಳೂರು ಪೊಲೀಸರು

ಬೆಂಗಳೂರು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಬೆಂಗಳೂರಿನ ಪೊಲೀಸರು ಎಚ್ಚರ ವಹಿಸುತ್ತಿದ್ದು, ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಿದ್ದಾರೆ. ಶನಿವಾರ ತಡರಾತ್ರಿ ನಗರದಾದ್ಯಂತ ಪಬ್, ರೆಸ್ಟೋರೆಂಟ್‍ಗಳನ್ನು ಪರಿಶೀಲನೆ ನಡೆಸಿದರು.
ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಅಕ್ರಮಗಳಿಗೆ ತಡೆ ಹಾಕುವ ಉದ್ದೇಶದಿಂದ ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಪಬ್, ರೆಸ್ಟೋರೆಂಟ್‍ಗಳಿಗೆ ತೆರಳಿ ಹೊಸ ವರ್ಷಾಚರಣೆಯ ತಯಾರಿಗಳ ಕುರಿತು ಮಾಹಿತಿ ಕಲೆಹಾಕಿ ಅಗತ್ಯ ಸೂಚನೆಗಳನ್ನು ನೀಡಿದರು. ಹಿರಿಯ ಅಧಿಕಾರಿಗಳೇ ಖುದ್ದು ತೆರಳಿ ಪರಿಶೀಲನೆ ಕಾರ್ಯದ ಮೇಲ್ವಿಚಾರಣೆ ನಡೆಸಿದರು.
ಈ ವೇಳೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್ ನೇಮಗೌಡ ಮಾತನಾಡಿ, ನಗರದಲ್ಲಿ ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಲಾಗಿದೆ. ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಪ್ಪಿಸಲು ಹಾಗೂ ಅಕ್ರಮಗಳನ್ನು ನಿಯಂತ್ರಿಸಲು ನಗರದ ವಿವಿಧೆಡೆ ತಪಾಸಣೆ ನಡೆಸಲಾಗಿದೆ. ಪಬ್, ರೆಸ್ಟೋರೆಂಟ್‍ಗಳಲ್ಲಿ ಏನೇನು ಮುಂಜಾಗ್ರತಾ ಕ್ರಮ ಕೈಗೊಳ್ಳಾಗಿದೆ. ಎಷ್ಟು ಜನರಿಗೆ ಆಸನ ವ್ಯವಸ್ಥೆಯಿದೆ, ಜನಸಂದಣಿ ನಿರ್ವಹಣೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.







