ಬೆಂಗಳೂರು: 'ಏರೋ ಇಂಡಿಯಾ' ವೈಮಾನಿಕ ಪ್ರದರ್ಶನಕ್ಕೆ ಚಾಲನೆ
'ಏರೋ ಇಂಡಿಯಾ'ದಿಂದ ಸಮಾನ ಮನಸ್ಕ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲವರ್ಧನೆ: ರಾಜನಾಥ್ ಸಿಂಗ್

Photo credti: X@AeroIndiashow
ಬೆಂಗಳೂರು: ಏರೋ ಇಂಡಿಯಾ 2025 ನಿರ್ಣಾಯಕ ಮತ್ತು ಮುಂಚೂಣಿ ತಂತ್ರಜ್ಞಾನಗಳ ಸಂಗಮವಾಗಿದ್ದು, ಇಂದಿನ ಅನಿಶ್ಚಿತತೆಗಳನ್ನು ನಿರ್ವಹಿಸಲು ಪರಸ್ಪರ ಗೌರವ, ಪರಸ್ಪರ ಆಸಕ್ತಿ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ಸಮಾನ ಮನಸ್ಕ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ವೇದಿಕೆ ಒದಗಿಸುತ್ತದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅವರಿಂದು ಯಲಹಂಕ ವಾಯು ನಿಲ್ದಾಣದಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿರುವ 15ನೇ ಆವೃತ್ತಿಯ ಏರೋ ಇಂಡಿಯಾ-2025' ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಏರೋ ಇಂಡಿಯಾ 2025 ದೇಶದ ಕೈಗಾರಿಕಾ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸುತ್ತದೆ ಮತ್ತು ಮಿತ್ರ ರಾಷ್ಟ್ರಗಳೊಂದಿಗೆ ಸಹಜೀವನದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರಗಳು ಒಗ್ಗೂಡಿ ಶಕ್ತಿಶಾಲಿಯಾಗಿ ಉತ್ತಮ ವಿಶ್ವ ವ್ಯವಸ್ಥೆಗಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಶಾಶ್ವತ ಶಾಂತಿಯನ್ನು ಸಾಧಿಸಬಹುದು ಎಂದು ಅವರು ಹೇಳಿದರು.
ಐದು ದಿನಗಳ ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರತಿನಿಧಿಗಳು, ಕೈಗಾರಿಕೆಗಳ ನಾಯಕರು, ವಾಯುಪಡೆಯ ಅಧಿಕಾರಿಗಳು, ವಿಜ್ಞಾನಿಗಳು, ರಕ್ಷಣಾ ವಲಯದ ತಜ್ಞರು, ನವೋದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಜಗತ್ತಿನಾದ್ಯಂತದ ಇತರ ಪಾಲುದಾರರು ಭಾಗವಹಿಸಲಿದ್ದಾರೆ ಮತ್ತು ಈ ಸಂಗಮವು ಭಾರತದ ಪಾಲುದಾರರನ್ನು ಎಲ್ಲರಿಗೂ ಪ್ರಯೋಜನ ತಲುಪುವಂತೆ ಮಾಡುತ್ತದೆ ಎಂದು ರಕ್ಷಣಾ ಸಚಿವರು ಹೇಳಿದರು.
“ನಾವು ಆಗಾಗ್ಗೆ ಖರೀದಿದಾರರು ಮತ್ತು ಮಾರಾಟಗಾರರಾಗಿ ಸಂವಹನ ನಡೆಸುತ್ತೇವೆ, ಅಲ್ಲಿ ನಮ್ಮ ಸಂಬಂಧಗಳು ವಹಿವಾಟಿನ ಮಟ್ಟದಲ್ಲಿರುತ್ತವೆ. ಆದರೂ ಮತ್ತೊಂದು ಹಂತದಲ್ಲಿ ಖರೀದಿದಾರ-ಮಾರಾಟಗಾರರ ಸಂಬಂಧವನ್ನು ಮೀರಿ ಕೈಗಾರಿಕಾ ಸಹಯೋಗದ ಮಟ್ಟಕ್ಕೆ ನಾವು ನಮ್ಮ ಪಾಲುದಾರಿಕೆಯನ್ನು ರೂಪಿಸುತ್ತೇವೆ. ಸಮಾನ ಮನಸ್ಕ ದೇಶಗಳೊಂದಿಗೆ ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿಯ ಅನೇಕ ಯಶಸ್ವಿ ಉದಾಹರಣೆಗಳನ್ನು ನಾವು ಹೊಂದಿದ್ದೇವೆ. ನಾವು ಭಾರತೀಯ ಭದ್ರತೆ ಅಥವಾ ಭಾರತೀಯ ಶಾಂತಿಯನ್ನು ಬದಿಗೊತ್ತುವುದಿಲ್ಲ, ಭದ್ರತೆ, ಸ್ಥಿರತೆ ಮತ್ತು ಶಾಂತಿ ರಾಷ್ಟ್ರೀಯ ಗಡಿಗಳನ್ನು ಮೀರಿದ ಹಂಚಿಕೆಯ ವಿಷಯಗಳಾಗಿವೆ. ನಮ್ಮ ವಿದೇಶಿ ಮಿತ್ರರ ಉಪಸ್ಥಿತಿಯು ನಮ್ಮ ಪಾಲುದಾರರು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ನಮ್ಮ ದೂರದೃಷ್ಟಿಯನ್ನು ಹಂಚಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ’’ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.
“ಭಾರತವು ಯಾವುದೇ ದೇಶದ ಮೇಲೆ ಎಂದಿಗೂ ದಾಳಿ ಮಾಡಿಲ್ಲ ಅಥವಾ ಯಾವುದೇ ಮಹಾನ್ ಶಕ್ತಿ ಪೈಪೋಟಿಯಲ್ಲಿ ಭಾಗಿಯಾಗಿಲ್ಲ. ನಾವು ಸದಾ ಶಾಂತಿ ಮತ್ತು ಸ್ಥಿರತೆಯ ಪ್ರತಿಪಾದಕರಾಗಿದ್ದೇವೆ. ಅದು ನಮ್ಮ ಮೂಲಭೂತ ಆದರ್ಶಗಳ ಭಾಗವಾಗಿದೆ" ಎಂದು ಅವರು ಹೇಳಿದರು. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಗೆ ಭಾರತದೊಂದಿಗಿನ ಸಹಕಾರವು ನಿರ್ಣಾಯಕವಾಗಿದೆ ಎಂದು ಹೇಳಿದರು.
2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ರಕ್ಷಣಾ ಸಚಿವಾಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಬಂಡವಾಳ ಹೂಡಿಕೆಗೆ 1.80 ಲಕ್ಷ ಕೋಟಿ ರೂ. ಸೇರಿದಂತೆ ಸರ್ಕಾರವು ರಕ್ಷಣೆಯನ್ನು ಅತ್ಯಂತ ಆದ್ಯತೆಯ ವಲಯವೆಂದು ಪರಿಗಣಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಹಿಂದಿನ ಬಜೆಟ್ನಂತೆ ಆಧುನೀಕರಣ ಬಜೆಟ್ನ ಶೇ.75 ರಷ್ಟು ಹಣವನ್ನು ದೇಶೀಯ ಮೂಲಗಳ ಮೂಲಕ ಖರೀದಿಗೆ ಮೀಸಲಿಡಲಾಗಿದೆ ಮತ್ತು ಭಾರತದ ರಕ್ಷಣಾ ಕೈಗಾರಿಕಾ ಸಂಕೀರ್ಣದ ಸಾಮರ್ಥ್ಯಗಳನ್ನು ವಿಸ್ತರಿಸುವ ಮತ್ತು ಗಾಢಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ರಕ್ಷಣಾ ಸಾಧನಗಳ ತಯಾರಕರು ರಕ್ಷಣಾ ವಲಯವನ್ನು ಬಲಪಡಿಸಲು ಸಹಯೋಗದ ವಿಧಾನಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದರು. ಗುಜರಾತ್ನಲ್ಲಿ ಸಿ-295 ಸಾರಿಗೆ ವಿಮಾನಗಳ ಉತ್ಪಾದನೆಗಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಏರ್ಬಸ್ ನಡುವಿನ ಜಂಟಿ ಉದ್ಯಮ ಈ ಸಹಕಾರದ ಉಜ್ವಲ ಉದಾಹರಣೆ ಎಂದು ಬಣ್ಣಿಸಿದರು. ಇಂದು ಭಾರತವು ವೈಮಾನಿಕ ಬಿಡಿಭಾಗಗಳು ಮತ್ತು ಕಾಂಪ್ಲೆಕ್ಸ್ ಸಿಸ್ಟಮ್ ಅಸೆಂಬ್ಲಿಗೆ ಜಾಗತಿಕವಾಗಿ ಆದ್ಯತೆಯ ತಾಣವಾಗಿದೆ ಮತ್ತು ಸಾರ್ವಜನಿಕ ವಲಯ ಮತ್ತು ಖಾಸಗಿ ಕೈಗಾರಿಕೆಗಳು ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು.
ರಕ್ಷಣಾ ಸಚಿವಾಲಯದಲ್ಲಿ 2025 ಅನ್ನು 'ಸುಧಾರಣೆಗಳ ವರ್ಷ' ಎಂದು ಘೋಷಿಸಿದಾಗ ರಕ್ಷಣಾ ಸಚಿವರು ಇದು ಕೇವಲ ಸರ್ಕಾರಿ ಘೋಷಣೆಯಲ್ಲ, ಆದರೆ ಸುಧಾರಣೆಗಳ ಕಡೆಗೆ ಸರ್ಕಾರದ ಬದ್ಧತೆ ಎಂದು ಬಣ್ಣಿಸಿದರು. ಸುಧಾರಣೆಗಳ ನಿರ್ಧಾರಗಳನ್ನು ಸಚಿವಾಲಯ ಮಟ್ಟದಲ್ಲಿ ಮಾತ್ರ ತೆಗೆದುಕೊಳ್ಳಲಾಗುತ್ತಿಲ್ಲ, ಬದಲಾಗಿ ಸಶಸ್ತ್ರ ಪಡೆಗಳು ಮತ್ತು ಡಿಪಿಎಸ್ಯುಗಳು ಸಹ ಈ ಪ್ರಯತ್ನದಲ್ಲಿ ಭಾಗವಹಿಸುತ್ತಿವೆ ಎಂದು ಅವರು ಹೇಳಿದರು. "ಸುಧಾರಣೆಗಳ ಈ ಅಭಿಯಾನವನ್ನು ಹೆಚ್ಚು ವೇಗವಾಗಿ ಮುಂದೆ ಕೊಂಡೊಯ್ಯಲು, ರಕ್ಷಣಾ ವಲಯದ ಎಲ್ಲಾ ಪಾಲುದಾರರ ಭಾಗವಹಿಸುವಿಕೆ ಇರಬೇಕು. ಸಚಿವಾಲಯದೊಂದಿಗೆ ಸಂಬಂಧಿಸಿದ ಎಲ್ಲಾ ಪಾಲುದಾರರಿಂದ ಸಲಹೆಗಳು ಸ್ವಾಗತಾರ್ಹ" ಎಂದು ಅವರು ಹೇಳಿದರು.
"ಮಹಾ ಕುಂಭ ಮೇಳವು ಆತ್ಮಾವಲೋಕನದ ಕುಂಭವಾಗಿದ್ದರೆ, ಏರೋ ಇಂಡಿಯಾ ಸಂಶೋಧನೆಯ ಕುಂಭವಾಗಿದೆ. ಮಹಾ ಕುಂಭವು ಆಂತರಿಕ ಶಕ್ತಿಯ ಮೇಲೆ ಕೇಂದ್ರೀಕರಿಸಿದರೆ, ಏರೋ ಇಂಡಿಯಾ ಬಾಹ್ಯ ಶಕ್ತಿಯ ಮೇಲೆ ಕೇಂದ್ರೀಕರಿಸುತ್ತದೆ. ಮಹಾ ಕುಂಭವು ಭಾರತದ ಸಂಸ್ಕೃತಿಯನ್ನು ಪ್ರದರ್ಶಿಸಿದರೆ, ಏರೋ ಇಂಡಿಯಾ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ" ಎಂದು ಅವರು ಹೇಳಿದರು.
ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನದ 15ನೇ ಆವೃತ್ತಿಯು ಮುಂದಿನ ಐದು ದಿನಗಳಲ್ಲಿ, ಜಾಗತಿಕ ವೈಮಾನಿಕ ಕಂಪನಿಗಳ ಅತ್ಯಾಧುನಿಕ ಉತ್ಪನ್ನಗಳ ಜೊತೆಗೆ ಭಾರತದ ವೈಮಾನಿಕ ಪರಾಕ್ರಮ ಮತ್ತು ಸ್ಥಳೀಯ ಅತ್ಯಾಧುನಿಕ ನಾವೀನ್ಯತೆಗಳನ್ನು ಪ್ರದರ್ಶಿಸಲಿದೆ. 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ದೂರದೃಷ್ಟಿಗೆ ಅನುಗುಣವಾಗಿ ಈ ಕಾರ್ಯಕ್ರಮವು ದೇಶೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಂತಾರಾಷ್ಟ್ರೀಯ ಸಹಯೋಗಗಳನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.
ಫೆಬ್ರವರಿ 10 ರಿಂದ 12 ರವರೆಗೆ ವ್ಯವಹಾರ ದಿನಗಳನ್ನಾಗಿ ಕಾಯ್ದಿರಿಸಲಾಗಿದೆ. 13 ಮತ್ತು 14 ನೇ ತಾರೀಖುಗಳು ಸಾರ್ವಜನಿಕ ದಿನಗಳಾಗಿ ಪ್ರದರ್ಶನವನ್ನು ವೀಕ್ಷಿಸಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ.
ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್, ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ಸೇನಾಪಡೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ಸಂಜೀವ್ ಕುಮಾರ್ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎಸ್ಪಿ ಧಾರ್ಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







