ಬೆಂಗಳೂರು | ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸಿಸಿಬಿ ಭೇಟಿ, ಪರಿಶೀಲನೆ

ಬೆಂಗಳೂರು: ಜೈಲಿನಲ್ಲಿರುವ ರೌಡಿಶೀಟರ್‌ಗಳು ಹೊರಗಡೆ ಇರುವ ಸಹಚರರ ಮೂಲಕ ಅಪರಾಧ ಚಟುವಟಿಕೆಗಳ ನಿಯಂತ್ರಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶನಿವಾರ ಸಿಸಿಬಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರೌಡಿಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ ಸೇರಿದಂತೆ ಹಲವರು ಕಾರಾಗೃಹದಲ್ಲಿದ್ದುಕೊಂಡು ಹೊರಗಡೆ ಇರುವ ಸಹಚರರ ಮೂಲಕ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರಾಗೃಹಕ್ಕೆ ಸಿಸಿಬಿ ಪೊಲೀಸರು ಭೇಟಿ ನೀಡಿದ್ದು, ಬ್ಯಾರಕ್‍ನಲ್ಲಿ ಮೊಬೈಲ್, ಶಸ್ತ್ರಾಸ್ತ್ರ ಸೇರಿದಂತೆ ಹಲವು ವಸ್ತುಗಳಿಗಾಗಿ ಹುಡುಕಾಟ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಜೈಲಿನ ಬ್ಯಾರಕ್ ಪರಿಶೀಲನೆ ಬಳಿಕ ಜೈಲಾಧಿಕಾರಿಗಳೊಂದಿಗೆ ರೌಡಿಶೀಟರ್ ಗಳ ವರ್ತನೆಗಳೊಂದಿಗೆ ಸಿಸಿಬಿ ಪೊಲೀಸರು ಚರ್ಚಿಸಿದ್ದಾರೆ. ಅಲ್ಲದೆ, ಕೇಂದ್ರ ಕಾರಾಗೃಹದಲ್ಲಿರುವ ಕೆಲವು ಅಪರಾಧಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುವ ಪ್ರಸ್ತಾಪವೂ ಸಹ ಇದೆ ಎಂದು ತಿಳಿದುಬಂದಿದೆ.





