ಬೆಂಗಳೂರು | ರಾಜಕಾರಣಿ ಹೆಸರಿನಲ್ಲಿ ವಂಚನೆ : ಮಹಿಳೆ ಸಹಿತ ಮೂವರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜಕಾರಣಿಗಳ ಹೆಸರು ಬಳಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಡಿ ಮಹಿಳೆ ಸೇರಿ ಮೂವರನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.
ರೇಖಾ(38), ಈಕೆಯ ಪತಿ ಮಂಜುನಾಥಚಾರಿ(40) ಮತ್ತು ಸ್ನೇಹಿತ ಚೇತನ್(35) ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ರೇಖಾ ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಸ್ಗಳ ಸಂಪರ್ಕ ಹೊಂದಿದ್ದು, ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದಳು. ಇದೇ ವೇಳೆ ದೂರುದಾರ ನಿಸಾರ್ ಅಹ್ಮದ್ ಸಾಲ ಪಡೆಯಲು ರೇಖಾಳನ್ನು ಸಂಪರ್ಕಿಸಿದ್ದರು. ನಿಸಾರ್ ಅಹ್ಮದ್ ಅಪಾರ ಪ್ರಮಾಣದ ಹಣ ಹೊಂದಿರುವ ವಿಚಾರ ರೇಖಾ ಗಮನಕ್ಕೆ ಬಂದಿತ್ತು.
ಆನಂತರ, ಹಣದ ಆಮಿಷವೊಡ್ಡಿ ನಿಸಾರ್ ಖಾತೆಯಿಂದ ರೇಖಾ ಖಾತೆಗೆ 5.75 ಕೋಟಿ ರೂ. ವರ್ಗಾವಣೆ ಮಾಡಿಕೊಂಡಿದ್ದಳು. ನಂತರವೂ ಆರೋಪಿ ರೇಖಾ ಹಣಕ್ಕೆ ಬೇಡಿಕೆಯಿಟ್ಟಾಗ, ತಮ್ಮ ಆಪ್ತರ ಮೂಲಕ ಪರಿಶೀಲಿಸಿದಾಗ ಆಕೆ ವಂಚಕಿ ಎಂಬುದು ಗೊತ್ತಾಗಿದೆ. ಹಣ ಕೇಳಿದಾಗ ರೇಖಾ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ನಿಸಾರ್ ಅಹ್ಮದ್ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.







