ಬೆಂಗಳೂರು| ಪಧವೀಧರರ ಕ್ಷೇತ್ರ-ಶಿಕ್ಷಕರ ಕ್ಷೇತ್ರ ಚುನಾವಣೆ: ಒಟ್ಟು 39,858 ಮತದಾರರು ನೋಂದಣಿ

ಬೆಂಗಳೂರು, ನ.23: ಬೆಂಗಳೂರು ಪಧವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಪಕ್ರಟವಾಗಿದ್ದು, ಒಟ್ಟು ಒಟ್ಟು 39,858 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ತಿಳಿಸಿದ್ದಾರೆ.
ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಪದವೀಧರರ ಕ್ಷೇತ್ರ ಚುನಾವಣೆಗೆ ಒಟ್ಟು 39,858 ಮತದಾರರು ನೋಂದಣಿ ಮಾಡಿಕೊಂಡಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ 6343 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಕೇಂದ್ರ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಕರಡು ಮತದಾರರ ಪಟ್ಟಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಡಿ.9ರವೆರೆಗೆ ಸಂಬಂಧಪಟ್ಟ ಮತದಾನ ನೋಂದಣಿ ಅಧಿಕಾರಿಗಳ ಬಳಿ ಸಲ್ಲಿಸಬಹುದು. ಡಿ.30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ವಿತರಿಸಲಾಗುತ್ತಿದೆ. ಅದರಂತೆ ಬೆಂಗಳೂರು ಕೇಂದ್ರದಲ್ಲಿ 44,000, ಬೆಂಗಳೂರು ಉತ್ತರದಲ್ಲಿ 52,000, ಬೆಂಗಳೂರು ದಕ್ಷಿಣದಲ್ಲಿ 42,350 ಹಾಗೂ ಬೆಂಗಳೂರು ನಗರದಲ್ಲಿ 97,000 ಮತದಾರರ ಗುರುತಿನ ಚೀಟಿಗಳನ್ನು ವಿತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ 15 ದಿನಗಳಲ್ಲಿ ಎಲ್ಲರಿಗೂ ಮತದಾರರ ಗುರುತಿನ ಚೀಟಿ ತಲುಪಲಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ 18 ವರ್ಷ ತುಂಬಿದ ಯುವ ಮತದಾರರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಬೇಕು. ಜೊತೆಗೆ ಇತರರನ್ನೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು.







