ಬೆಂಗಳೂರು | ಪೊಲೀಸರು ವಶಪಡಿಸಿಕೊಂಡಿದ್ದ 130ಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿ

ಬೆಂಗಳೂರು: ಪೊಲೀಸರು ವಶಪಡಿಸಿಕೊಂಡಿದ್ದ ವಾಹನಗಳು ಸೇರಿದಂತೆ ಸುಮಾರು 130ಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ಇಲ್ಲಿನ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಇಲ್ಲಿನ ಜಕ್ಕರಾಯನಕೆರೆ ಮೈದಾನದಲ್ಲಿ ಪೊಲೀಸರಿಂದ ಜಪ್ತಿಯಾದ ಹಾಗೂ ಮತ್ತಿತರ ಹಳೆಯ ದ್ವಿಚಕ್ರ ವಾಹನ, ಕಾರು ಸೇರಿದಂತೆ ಸುಮಾರು 500ಕ್ಕೂ ಅಧಿಕ ವಾಹನಗಳನ್ನ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಬುಧವಾರ ಬೆಳಗ್ಗೆ 11:30ರ ಸುಮಾರಿಗೆ ಸ್ಥಳದಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ವ್ಯಾಪಿಸಿದ ಪರಿಣಾಮ 130ಕ್ಕೂ ಅಧಿಕ ವಾಹನಗಳು ಸುಟ್ಟು ಕರಕಲಾಗಿವೆ.
ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಹತೋಟಿಗೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 70 ಪೊಲೀಸ್ ಠಾಣೆಗಳ ವಾಹನಗಳನ್ನು ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಅವಘಡದಲ್ಲಿ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ ವಾಹನಗಳು ಅಗ್ನಿಗಾಹುತಿಯಾಗಿವೆ. ಸದ್ಯ ಬೆಂಕಿ ನಂದಿಸುವ ಕೆಲಸ ಆಗಿದೆ. ಘಟನೆಗೆ ಕಾರಣವೇನು ಎಂದು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.





