ಬೆಂಗಳೂರು | 2 ಕೋಟಿ ರೂ. ದರೋಡೆ ಪ್ರಕರಣ : 15 ಆರೋಪಿಗಳ ಬಂಧನ, 1.11 ಕೋಟಿ ರೂ. ನಗದು ವಶ

ಸಾಂದರ್ಭಿಕ ಚಿತ್ರ | PC : .freepik
ಬೆಂಗಳೂರು : ನಗದು ಹಣವನ್ನು ಡಿಜಿಟಲ್ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಡುವುದಾಗಿ ಉದ್ಯಮಿಯನ್ನು ನಂಬಿಸಿ 2 ಕೋಟಿ ರೂ. ಹಣ ಪಡೆದು ಬಳಿಕ ಅಪರಿಚಿತ ವ್ಯಕ್ತಿಗಳಿಂದ ದರೋಡೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದ ವ್ಯಕ್ತಿ ಸೇರಿ ಒಟ್ಟು 15 ಮಂದಿ ಆರೋಪಿಗಳನ್ನು ಇಲ್ಲಿನ ವಿದ್ಯಾರಣಪುರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸುಳ್ಳು ದೂರು ನೀಡಿದ್ದ ಶ್ರೀಹರ್ಷ ಹಾಗೂ ಆತನ ಸಹಚರರಾದ ರಕ್ಷಿತ್, ಚಂದ್ರಶೇಖರ, ರಾಕೇಶ್, ಬೆಂಜಮಿನ್ ಸಹಿತ ಒಟ್ಟು 15 ಮಂದಿ ಆರೋಪಿಗಳನ್ನು ಬಂಧಿಸಿ 1.11 ಕೋಟಿ ರೂ. ನಗದು, ಕೃತ್ಯಕ್ಕೆ ಬಳಸಿದ್ದ 4 ಕಾರುಗಳು, 4 ದ್ವಿಚಕ್ರವಾಹನಗಳು, 2 ಆಟೋಗಳು, 8 ಮೊಬೈಲ್ ಹಾಗೂ ಒಂದು ಲಾಂಗ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಚಿಕ್ಕಪೇಟೆಯ ಎಲೆಕ್ಟ್ರಿಕ್ ಉದ್ಯಮಿಯಿಂದ 2 ಕೋಟಿ ರೂ. ಪಡೆದು ಈ ಹಣವನ್ನು ಡಿಜಿಟಲ್ ಕರೆನ್ಸಿಯಾಗಿ ಪರಿವರ್ತಿಸಿ, ಆರ್ಟಿಜಿಎಸ್ ಮೂಲಕ ಹಣ ದ್ವಿಗುಣಗೊಳಿಸುವುದಾಗಿ ಆರೋಪಿ ಶ್ರೀಹರ್ಷ ನಂಬಿಸಿದ್ದ. ಇದರಂತೆ ಹಣ ಪಡೆದು ಜೂನ್ 25 ರಂದು ವಿದ್ಯಾರಣ್ಯಪುರದ ಎಂ.ಎಸ್.ಪಾಳ್ಯ ಬಳಿಯ ಅಂಗಡಿಯಲ್ಲಿರುವಾಗ ಪೂರ್ವ ಸಂಚಿನಂತೆ ಹಣ ದರೋಡೆ ಮಾಡಿಸಿದ್ದ. ಬಳಿಕ ಅಪರಿಚಿತ ವ್ಯಕ್ತಿಗಳಿಂದ 2 ಕೋಟಿ ದರೋಡೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳೊಂದಿಗೆ ದೂರುದಾರ ಶ್ರೀಹರ್ಷನ ಪಾತ್ರವಿರುವುದು ಕಂಡುಬಂದಿತ್ತು. ವ್ಯವಸ್ಥಿತ ಸಂಚು ರೂಪಿಸಿ ಕೆಲ ಆರೋಪಿಗಳಿಂದ ದರೋಡೆ ಮಾಡಿಸಿದ್ದ. ಮೇಲ್ನೋಟಕ್ಕೆ ನೈಜವಾಗಿ ದರೋಡೆ ಆಗಿರುವುದಾಗಿ ಎಲ್ಲರನ್ನು ನಂಬಿಸಿದ್ದ. ಬಳಿಕ ತೀವ್ರ ತನಿಖೆ ನಡೆಸಿದಾಗ ದೂರುದಾರ ವ್ಯಕ್ತಿಯೇ ದರೋಡೆ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿತ್ತು. ಬಳಿಕ ಹಂತ ಹಂತವಾಗಿ ಒಟ್ಟು 15 ಮಂದಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







