ಜಗತ್ತಿನ ಎಲ್ಲ ಭಾಷೆಯ ಜನರಿಗೆ ನಮ್ಮ ಆಲೋಚನಾ ಕ್ರಮ ಪರಿಚಯಿಸುವ ಅಗತ್ಯವಿದೆ : ಬಾನು ಮುಷ್ತಾಕ್

ಬೆಂಗಳೂರು : ಜಗತ್ತಿನ ಬೇರೆ ಬೇರೆ ಭಾಷೆಯ ಜನರ ಜೀವನ ಕ್ರಮವನ್ನು ನಾವು ಅಭ್ಯಾಸ ಮಾಡಿದ್ದೇವೆ. ಈಗ ನಮ್ಮ ಜೀವನ ಕ್ರಮ, ಆಲೋಚನಾ ಕ್ರಮವನ್ನು ಅವರಿಗೆ ಪರಿಚಯ ಮಾಡಿಸಬೇಕಾದ ಅಗತ್ಯ ಇದೆ. ಅವರು ಕೂಡ ತೆರೆದ ಮನಸ್ಸಿನಿಂದ ಇದ್ದಾರೆ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಹುರೂಪಿ ಪ್ರಕಾಶನ, ಗಾಂಧಿ ಸ್ಮಾರಕ ನಿಧಿ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್, ದೀಪಾ ಬಾಸ್ತಿ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೂಕರ್ ಪ್ರಶಸ್ತಿಯನ್ನು ಮೈಸೂರ್ ಸಿಲ್ಕ್ ಸೀರೆಯುಟ್ಟು ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ, ದಾರಿಯಲ್ಲಿ ನನ್ನ ಸೂಟ್‍ಕೇಸ್ ಕಳೆದು ಹೋದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಇನ್ನೊಂದು ಬಾರಿ ಮೈಸೂರ್ ಸಿಲ್ಕ್ ಸೀರೆಯುಟ್ಟು ಬೂಕರ್ ಪ್ರಶಸ್ತಿ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ಹಾರ್ಟ್ ಲ್ಯಾಂಪ್ ಕೃತಿ ಶಾರ್ಟ್ ಲಿಸ್ಟ್ ಆಗೋದು ಕೂಡ ದೊಡ್ಡ ವಿಷ್ಯವೇ, ಆದ್ದರಿಂದ ಬೂಕರ್ ಬರಲೇಬೇಕು ಎಂಬ ಹಠವೇಕೆ ಎಂದು ಸುಮ್ಮನಿದ್ದೆ, ಆದರೆ ಕೊನೆಯ ದಿನಗಳಲ್ಲಿ ಬೂಕರ್ ಬರಲೇಬೇಕು ಎಂದು ಪ್ರಶಸ್ತಿ ಸ್ವೀಕರಸಿದ ನಂತರ ಮಾಡಬೇಕಾದ ಭಾಷಣವನ್ನು ಸಿದ್ಧಪಡಿಸಿಕೊಂಡು, ಭಾಷಣ ಮಾಡುವ ತಯಾರಿಯನ್ನು ಕೂಡ ಮಾಡಿದೆ. ಪ್ರಶಸ್ತಿ ಘೋಷಣೆಯಾದ ತಕ್ಷಣ ಸುಮ್ಮನೇ ಇದ್ದೆ, ಆಮೇಲೆ ಗೊತ್ತಾಯಿತು. ಕನ್ನಡಕ್ಕೆ ಬೂಕರ್ ಬಂದಿದೆ ಎಂದು. ನಾನು ಭಾವುಕ ಆಗಲಿಲ್ಲ. ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಹಾಗೆ ಭಾಷಣವನ್ನು ಪ್ರಾರಂಭಿಸಿದೆ. ಆ ಭಾಷಣವನ್ನು ಜಾಗತಿಕ ಮಟ್ಟದಲ್ಲಿ ತುಂಬಾ ಇಷ್ಟಪಟ್ಟರು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಕನ್ನಡ ಬಹಳ ಪ್ರಸ್ತುತ ಎನಿಸುತ್ತದೆ ಯಾಕೆಂದರೆ, ಕನ್ನಡ ಒಂದು ಭಾಷೆಯಾಗಿ ಮಾತ್ರವಲ್ಲದೇ ಒಂದು ಜೀವನ ಕ್ರಮವಾಗಿ ಕೊಡುಕೊಳ್ಳುವಿಕೆಯ ವ್ಯವಹಾರದ ಭಾಷೆಯಾಗಿ ಕನ್ನಡ ಒಂದು ರಾಜಕಾರಣವಾಗಿ ಕೂಡ ಕಾಣಿಸುತ್ತದೆ ಎನ್ನುವುದು ಬೂಕರ್ ಸ್ವೀಕರಿಸುವಾಗ ತಿಳಿಯಿತು. ಅಲ್ಲಿ ನಡೆಯುವ ಸಂವಾದಗಳಲ್ಲಿ ರಾಜ್ಯದ ಸಾಮಾಜಿಕ ಚಳವಳಿ, ದಲಿತ, ರೈತ ಚಳವಳಿ, ಭಾಷೆ, ಬಂಡಾಯ ಚಳವಳಿಗಳ ಬಗ್ಗೆ ಮಾತನಾಡಿದ್ದೇನೆ. ಬದ್ಧತೆ ಎನ್ನುವುದು ಕರ್ನಾಟಕದ ಲೇಖಕರ ಮೂಲಭೂತ ಗುಣ. ಅದು ಯಾಕೆ ಅಗತ್ಯ ಎನ್ನವುದನ್ನು ಅಲ್ಲಿ ಬಂದಿದ್ದವರಿಗೆ ಮನವರಿಕೆ ಮಾಡಿಕೊಟ್ಟ ಮೇಲೆ ಅದನ್ನು ಒಪ್ಪಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ವಿಚ್ಛಿದ್ರಕಾರಿ ಶಕ್ತಿಗಳು, ಮತಾಂಧತೆ ಹಾಗೂ ಮೂಲಭೂತವಾದ ಒಟ್ಟಾಗಿ ಬೆಸೆದುಕೊಂಡು ಜಗತ್ತನ್ನು ನಾಶ ಮಾಡುತ್ತಿರುವ ಹೊತ್ತಲ್ಲಿ, ಬಾನು ಮುಷ್ತಾಕ್ ಅವರ ಮಾನವೀಯತೆಯ ಬೆಸುಗೆ ಮತ್ತು ಭಾರತೀಯತೆಯ ಬೆಸುಗೆಗೆ ಬೂಕರ್ ಪ್ರಶಸ್ತಿ ಬಂದಿದೆ ಎಂದು ಮೆಚ್ಚುಗೆ ಸೂಚಿಸಿದರು.
ಸಾಹಿತ್ಯದ ಹೆಸರಿನಲ್ಲಿ ಕೊಡುತ್ತಿರುವ ಈ ಪ್ರಶಸ್ತಿಯು, ಎಲ್ಲ ಮೂಲಭೂತವಾದಿ ಶಕ್ತಿಗಳಿಗೆ ಕೊಟ್ಟಿರುವ ಕಪಾಳಮೋಕ್ಷ ಎಂದು ನಾನು ಭಾವಿಸುತ್ತೇನೆ. ಇದು ಎಲ್ಲಾ ರೀತಿಯ ಧಾರ್ಮಿಕ ದರ್ಪಗಳಿಗೆ ಕೊಟ್ಟಿರುವ ಏಟು ಮತ್ತು ಮಾನವೀಯ ಧರ್ಮಕ್ಕೆ, ಎಲ್ಲಾ ಧರ್ಮದಲ್ಲಿರುವ ಮಾನವೀಯ ವ್ಯಕ್ತಿತ್ವಗಳಿಗೆ ಸಿಕ್ಕಿರುವ ಮನ್ನಣೆ ಕೂಡ ಆಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತ ಜಿ.ಎನ್.ಮೋಹನ್, ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಷಾ ಖಾನಂ, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪತ್ರಕರ್ತ ಕೆ.ಎನ್.ಚನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.







