ಬಸವ ಮಂಟಪ ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್

ಬೆಂಗಳೂರು: ವಿವಾದಿತ 'ಬಸವ ಮಂಟಪ' ಕೃತಿ ವಿಚಾರವಾಗಿ ತನ್ನ ಮೇಲೆ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಲೇಖಕ ರವಿ ಹಂಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವೈಯಕ್ತಿಕ ದ್ವೇಷದಿಂದ ದೂರುದಾರ ಅರವಿಂದ ಜತ್ತಿ ತನ್ನ ವಿರುದ್ಧ ದೂರು ನೀಡಿದ್ದಾರೆ. ಬಸವ ಮಂಟಪ ಕೃತಿಯಲ್ಲಿ ಉಲ್ಲೇಖಿಸಿರುವ ಅಂಶಗಳು ನನ್ನ ಸ್ವಂತ ಅಭಿಪ್ರಾಯವಲ್ಲ. ಅದು ಮೈಸೂರು ಗೆಜೆಟಿಯರ್ ಬಸವ ಪುರಾಣ ಹಾಗೂ ಡಾ.ಎಂ.ಎಂ.ಕಲ್ಬುರ್ಗಿ ಸೇರಿದಂತೆ ಹಲವು ವಿದ್ವಾಂಸರ ಸಂಶೋಧನಾ ಕೃತಿಗಳನ್ನು ಆಧರಿಸಿವೆ. ಐತಿಹಾಸಿಕ ಮತ್ತು ಸಾಹಿತ್ಯಿಕ ವಿಮರ್ಶೆ ನಡೆಸುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಬಸವಣ್ಣನರನ್ನು ಅಥವಾ ಲಿಂಗಾಯತ ಸಮುದಾಯವನ್ನಾಗಲಿ ಅವಮಾನಿಸುವ ಉದ್ದೇಶ ಕೃತಿಗೆ ಇಲ್ಲ ಎಂದು ಅವರು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ತನ್ನನ್ನು ಕೊಲೆ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಬಹಿರಂಗ ಘೋಷಣೆ ಮಾಡಿದ್ದಾರೆ. ಆದ್ದರಿಂದ ವಿಚಾರಣೆಗೆ ಹಾಜರಾಗಲು ಜೀವಬೆದರಿಕೆ ಇದೆ. ಕಾನೂನು ದುರುಪಯೋಗಪಡಿಸಿಕೊಂಡು ಮಾಡಿಕೊಂಡು ನನ್ನ ಮೇಲೆ FIR ಮಾಡಿದ್ದಾರೆ. ಹಾಗಾಗಿ ನನ್ನ ವಿರುದ್ಧ ದಾಖಲಾಗಿರುವ FIR ರದ್ದು ಮಾಡಬೇಕೆಂದು ರವಿ ಹಂಜ್ ಮನವಿ ಮಾಡಿದ್ದಾರೆ.
ಅರ್ಜಿ ಇಂದು ವಿಚಾರಣೆಗೆ ನಿಗದಿಯಾಗುವ ಸಾಧ್ಯತೆ ಇದೆ. ಅರ್ಜಿಯಲ್ಲಿ ದೂರುದಾರ ಅರವಿಂದ ಜತ್ತಿ ಹಾಗೂ ಎಫ್ಐಆರ್ ದಾಖಲಿಸಿರುವ ಹೈಗ್ರೌಂಡ್ಸ್ ಪೊಲೀಸರನ್ನ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ'






