ಸ್ಯಾಮ್ ಸಂಗ್ ಎಐ ತರಬೇತಿಯನ್ನು ಕಲ್ಯಾಣ ಕರ್ನಾಟಕಕ್ಕೂ ವಿಸ್ತರಿಸಲಿ : ಬಸವರಾಜ ರಾಯರಡ್ಡಿ

ಬೆಂಗಳೂರು : ಬೆಂಗಳೂರಿನ ನೃಪತುಂಗ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯಗಳ 2000 ವಿದ್ಯಾರ್ಥಿಗಳಿಗೆ ಉಚಿತವಾಗಿ ಜೆನ್‍ಎಐ ಮತ್ತು ಎಐ ತರಬೇತಿ ನೀಡುತ್ತಿರುವ ಸ್ಯಾಮ್ ಸಂಗ್ ಇಂಡಿಯಾ ಕಂಪೆನಿಯ ಈ ಕಾರ್ಯವು ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕಕ್ಕೂ ವಿಸ್ತರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.
ಬುಧವಾರ ನಗರದ ಎಫ್‍ಕೆಸಿಸಿಐನ ಸರ್ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸ್ಯಾಮ್ ಸಂಗ್ ಇನ್ನೋವೇಷನ್ ಕ್ಯಾಂಪಸ್ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ಯಾಮ್ ಸಂಗ್ ಇಂಡಿಯಾ ಕಂಪೆನಿಯಿಂದ ಇದೊಂದು ಉತ್ತಮ ನಡೆಯಾಗಿದ್ದು, ಸಂಸ್ಥೆಗೆ ಧನ್ಯವಾದ ಹೇಳುತ್ತೇನೆ. ಸರಕಾರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಜೆನ್‍ಎಐ ಮತ್ತು ಎಐ ತರಬೇತಿ ನೀಡುವ ಮೂಲಕ ಅವರಿಗೆ ಉದ್ಯೋಗ ಪಡೆಯಲು ಸಹಕಾರ ಆಗುತ್ತದೆ ಎಂದು ರಾಯರೆಡ್ಡಿ ಹೇಳಿದರು.
ಇಂದಿನ ಕಾಲದಲ್ಲಿ ಪದವಿ ಪಡೆದ ಮಾತ್ರಕ್ಕೆ ಉದ್ಯೋಗ ಸಿಗುವುದಿಲ್ಲ. ಕೌಶಲ್ಯ, ಸಂಶೋಧನಾ ಪ್ರವೃತ್ತಿ ಮತ್ತು ವೃತ್ತಿಪರತೆ ಬಹಳ ಮುಖ್ಯ. ಈ ತರಬೇತಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸಲು ಸಹಕಾರಿ. ಬೆಂಗಳೂರಿನ ನೃಪತುಂಗ ವಿ.ವಿ. ಮತ್ತು ಮಹಾರಾಣಿ ಕ್ಲಸ್ಟರ್ ವಿ.ವಿ.ಗಳಲ್ಲಿ ಓದುತ್ತಿರುವ 2 ಸಾವಿರ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ತರಬೇತಿ ನೀಡುವ ಮೂಲಕ, ಅವರ ಭವಿಷ್ಯಕ್ಕೆ ಸದೃಢವಾಗಲು ಇದು ಖಂಡಿತ ಸಹಕಾರಿ ಎಂದು ರಾಯರೆಡ್ಡಿ ತಿಳಿಸಿದರು.
ಸ್ಯಾಮ್ ಸಂಗ್ ಇಂಡಿಯಾ ಕಂಪೆನಿಯ ಈ ಮಹತ್ತಾದ ಯೋಜನೆಯು ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ, ಹುಬ್ಬಳ್ಳಿ ಮುಂತಾದ ಕಡೆಯೂ ಜಾರಿಗೆ ಬರಲಿ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಹಾಯ ಆಗಲಿದೆ ಎಂದು ರಾಯರಡ್ಡಿ ಮನವಿ ಮಾಡಿದರು.
ಬೆಂಗಳೂರು ಭಾರತದ ಟೆಕ್ ಹಬ್ ಆಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಐ ವಿಶ್ವವಿದ್ಯಾನಿಲಯ ನಿರ್ಮಾಣ ಮಾಡಲು ಉತ್ಸುಕರಾಗಿದ್ದಾರೆ. ಇದು ಇಂದಿನ ಅಗತ್ಯವಾಗಿದ್ದು, ಮುಖ್ಯಮಂತ್ರಿಗಳ ಈ ಯೋಚನೆಯನ್ನು ನಾನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ರಾಯರಡ್ಡಿ ಹೇಳಿದರು.
ಕಾರ್ಯಕ್ರಮದಲ್ಲಿ ಸ್ಯಾಮ್ ಸಂಗ್ ಇಂಡಿಯಾ ಸಿಎಸ್‍ಆರ್ ವಿಭಾಗದ ಹಿರಿಯ ಅಧಿಕಾರಿಗಳು, ಉಪಕುಲಪತಿಗಳು, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






