ಜಿಎಸ್‍ಟಿ ಸರಳೀಕರಣದಿಂದ ದೇಶದ ಜಿಡಿಪಿ ಎರಡಂಕಿಗೆ ಹೆಚ್ಚಳ : ಬಸವರಾಜ ಬೊಮ್ಮಾಯಿ

ಬೆಂಗಳೂರು, ಆ.28: ಜಿಎಸ್‍ಟಿ ಕಡಿತ ಮತ್ತು ಸರಳೀಕರಣ ಮಾಡಲು ತೀರ್ಮಾನಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಅಭಿನಂದನೆ ಸಲ್ಲಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ಈ ಕ್ರಮದಿಂದಾಗಿ ದೇಶದ ಜಿಡಿಪಿ ಎರಡಂಕಿಗೆ ಹೆಚ್ಚಳವಾಗಲಿದ್ದು, ಭಾರತ ವಿಶ್ವದ ನಾಲ್ಕನೆ ಆರ್ಥಿಕ ಶಕ್ತಿಯಿಂದ ಮೂರನೆ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ಕುರಿತು ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಅವರು, ನಿಮ್ಮ ನಾಯಕತ್ವದಲ್ಲಿ ನಮ್ಮ ದೇಶದ ಆರ್ಥಿಕತೆ ಬಲಗೊಳಿಸಲು ಬಲಿಷ್ಠ ಮತ್ತು ಪರಿಣಾಮಕಾರಿ ಸುಧಾರಣೆಗಳನ್ನು ತರುತ್ತಿರುವುದಕ್ಕೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಹಾಗೂ ನಿಮ್ಮ ಬದ್ದತೆಯಿಂದಾಗ ದೇಶದ ತೆರಿಗೆ ಕಾಯ್ದೆಗಳ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಜಿಎಸ್‍ಟಿ ಜಾರಿ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದೀರಾ ಎಂದು ತಿಳಿಸಿದ್ದಾರೆ.
ಕೆಂದ್ರ ಸರಕಾರಕ್ಕೆ ಜಿಎಸ್‍ಟಿ ಜಾರಿ ಅತ್ಯಂತ ಸವಾಲಿನ ಕೆಲಸವಾಗಿತ್ತು. ಆರಂಭದಲ್ಲಿ ರಾಜ್ಯಗಳೂ ಕೂಡ ಹಿಂಜರಿಕೆಯಿಂದಲೆ ಜಿಎಸ್‍ಟಿ ಜಾರಿಗೊಳಿಸಲು ತೀರ್ಮಾನಿಸಿದವು. ಸ್ವಲ್ಪ ಸಮಯದ ನಂತರ ರಾಜ್ಯಗಳಿಗೂ ಜಿಎಸ್‍ಟಿ ಮಹತ್ವದ ಅರಿವಾಯಿತು. ತೆರಿಗೆ ಸಂಗ್ರಹ ಹೆಚ್ಚಳ ಮಾಡುವುದು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸವಾಲಿನ ಕೆಲಸವಾಗಿತ್ತು ಎಂದು ಅವರು ಹೇಳಿದ್ದಾರೆ.
ಜಿಎಸ್‍ಟಿ-2 ಮುಂದಿನ ತಲೆಮಾರಿನ ಸುಧಾರಣೆ ಕ್ರಮವಾಗಿದೆ. ನೀವು ವೈಯಕ್ತಿಕ ಮುತುವರ್ಜಿ ವಹಿಸಿ ಜಿಎಸ್‍ಟಿ ಕೌನ್ಸಿಲ್ ನ ಜವಾಬ್ದಾರಿ ತೆಗೆದುಕೊಂಡಿದ್ದು, ಜಿಎಸ್‍ಟಿ ತೆರಿಗೆ ಸುಧಾರಣೆ ಮತ್ತು ಸ್ಲ್ಯಾಬ್ ಕಡಿತ ಮಾಡಲು ತೀರ್ಮಾನಿಸಿದ್ದು, ಈ ತೀರ್ಮಾನವನ್ನು ಇಡೀ ದೇಶ ಮುಕ್ತ ಮನಸ್ಸಿನಿಂದ ಸ್ವಾಗತಿಸಿದೆ. ವಿಶೇಷವಾಗಿ ವಾಣಿಜ್ಯೋದ್ಯಮ ಸಮುದಾಯ ಸ್ವಾಗತಿಸಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಸಾಕಷ್ಟು ವಾಣಿಜ್ಯ ವಹಿವಾಟುಗಳು ಜಿಎಸ್‍ಟಿ ವ್ಯಾಪ್ತಿಗೆ ಒಳಪಡಲಿವೆ. ಇದರಿಂದ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.







