ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು : ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ. 2: ‘ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ಯುದ್ಧ ಮಾಡುತ್ತಿದ್ದು, ಇರಾನ್ ಪ್ರತ್ಯುತ್ತರ ನೀಡುತ್ತಿರುವುದು ಆತಂಕವಾಗಿದೆ. ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯ ಇಡೀ ವಿಶ್ವದ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರದೇಶ. ಮೊದಲು ಜರಸಲೇಮ್‍ಗಾಗಿ ಯುದ್ಧ ನಡೆಯುತಿತ್ತು. ಈಗ ಪೆಟ್ರೋಲಿಯಂ, ಧಾರ್ಮಿಕ ವಿಚಾರಕ್ಕೆ ಯುದ್ಧ ಅಗುತ್ತಿದೆ. ಅಮೆರಿಕ ತೈಲೋತ್ಪನ್ನಗಳ ಮೇಲೆ ಹಿಡಿತ ಸಾಧಿಸಲು ಹೋರಾಟ ಮಾಡುತ್ತಿದೆ. ಅಮೆರಿಕ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಮೂರನೇ ವಿಶ್ವ ಯುದ್ದ ಆಗಲು ಚೀನಾ ಮತ್ತು ರಶ್ಯಾ ಇನ್ನೂ ಯುದ್ದಕ್ಕೆ ಇಳಿದಿಲ್ಲ. ಕಾದು ನೋಡುವ ತಂತ್ರ ಮಾಡುತ್ತಿವೆ. ಅವರೂ ಯುದ್ದ ರಂಗಕ್ಕೆ ಇಳಿದರೆ ಬಹಳ ದೊಡ್ಡ ಮಟ್ಟಕ್ಕೆ ಹೋಗಲಿದೆ. ದೊಡ್ಡ ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು. ಹಲವು ಯುದ್ಧಗಳ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.
ಶಾಂತಿ ನೆಲೆಸಿದ ಬಳಿಕ ಕರೆ ತರಬಹುದು. ದುಬೈ, ಅಬುದಾಬಿ, ಸೌಧಿ ಅರೇಬಿಯಾ ಒಂದೇ ಬಾರಿ ಯುದ್ಧ ನಡೆಯುತ್ತಿದೆ, ಹಾಗಾಗಿ ಒಟ್ಟಿಗೆ ಸಮಸ್ಯೆ ಆಗಿದೆ. ಎಲ್ಲ ಕಡೆ ಭಾರತೀಯರು ಇದ್ದಾರೆ. ಭಾರತ ಸರಕಾರ ಮಹತ್ವದ ಪಾತ್ರವಿದೆ. ಅವರಿಗೆ ಅನ್ನ, ವಸತಿ ನೀಡುವ ಬಗ್ಗೆ ಕ್ರಮ ಆಗಬೇಕು. ಭಾರತ ತನ್ನ ತೈಲ ದಾಸ್ತಾನಿನ ಮೇಲೆ ಅವಲಂಭಿತವಾಗಿತ್ತು. ಹಾಗಾಗಿ ಭಾರತದ ಮೇಲೂ ಪರಿಣಾಮ ಬೀರಲಿದೆ ಎಂದರು.
ಹತ್ತು ವರ್ಷಗಳ ಹಿಂದೆ ಆಯಿಲ್‍ಗಾಗಿ ಕ್ಯೂ ನಿಂತಿತ್ತು. ಮತ್ತೆ ಅಂತದ್ದೇ ಸ್ಥಿತಿ ಬರಬಹುದು. ಪಾಕಿಸ್ತಾನ ಸೇರಿದಂತೆ ಬೇರೆ-ಬೇರೆ ದೇಶಗಳಲ್ಲಿ ಆಗಿರುವ ಹಿಂಸೆ ನೋಡಿದರೆ ಭಾರತದಲ್ಲಿ ಅಂತಹ ಹಿಂಸೆ ಆಗಿಲ್ಲ. ಪಾಕಿಸ್ತಾನದಲ್ಲಿ ಗೋಲಿಬಾರ್ ಆಗಿತ್ತು. ಭಾರತದಲ್ಲಿ ಆ ರೀತಿ ಆಗಲು ಅವಕಾಶ ಇಲ್ಲ ಎಂದು ಅವರು ಹೇಳಿದರು.







