ದಲಿತ ಉದ್ದಿಮೆದಾರರ ಸಂಖ್ಯೆ 5 ಸಾವಿರಕ್ಕೇರಲು ಸಿ.ಜಿ.ಶ್ರೀನಿವಾಸನ್ ಪರಿಶ್ರಮ ಕಾರಣ : ಬೊಮ್ಮಾಯಿ

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ದಲಿತ ಉದ್ದಿಮೆದಾರರ ಸಂಖ್ಯೆ ಇಂದು ಐದು ಸಾವಿರ ಆಗಿದೆ ಎಂದರೇ ಅದಕ್ಕೆ ಸಿ.ಜಿ.ಶ್ರೀನಿವಾಸನ್ ಪರಿಶ್ರಮ, ಹೋರಾಟವೂ ಕಾರಣ. ಈ ಸಂಖ್ಯೆ 10 ಸಾವಿರ ಆಗಬೇಕು. ಇದಕ್ಕಾಗಿ ನಿಮ್ಮ ಹಕ್ಕುಗಳನ್ನು ಸರಕಾರದ ಬಳಿ ಕೇಳಿ ಪಡೆಯಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ‘ದಲಿತ ಉದ್ದಿಮೆದಾರರ ಆಶಾಕಿರಣ ಸಿ.ಜಿ. ಶ್ರೀನಿವಾಸನ್ ಅಭಿನಂದನಾ ಸಮಾರಂಭ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರು ಮಾತ್ರ ಯಾವುದೇ ಪ್ರಭಾವಿ ಸ್ಥಾನಗಳಲ್ಲಿ ಇರದಿದ್ದರೂ, ಶಕ್ತಿಶಾಲಿ ಮತ್ತು ಪ್ರಭಾವಿಯಾಗಿರುತ್ತಾರೆ. ಅಂತಹವರಲ್ಲಿ ಸಿ.ಜಿ.ಶ್ರೀನಿವಾಸನ್ ಅವರೂ ಇದ್ದಾರೆ ಎಂದರು.
ಸಿ.ಜಿ.ಶ್ರೀನಿವಾಸನ್ ಅವರು ಕೈಗಾರಿಕಾ ಇಲಾಖೆಯಲ್ಲಿ ನಿರ್ವಹಿಸುತ್ತಿದ್ದ ಮುಖ್ಯ ವ್ಯವಸ್ಥಾಪಕರ ಹುದ್ದೆಗೆ ಸ್ವಯಂ ನಿವೃತ್ತಿ ತೆಗೆದುಕೊಂಡು ದಲಿತ ಉದ್ದಿಮೆದಾರರ ಸಂಘಟನೆ ಮಾಡಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಭಾವಿ ಹುದ್ದೆಯಿಲ್ಲದೆ ಪವರ್‌ಫುಲ್ ಮ್ಯಾನ್ ಆಗಿದ್ದಾರೆ. ಇದಕ್ಕೆ ಯಾವುದೇ ಅಪೇಕ್ಷೆ ಇಲ್ಲದೆ, ಯಾವುದಕ್ಕೂ ರಾಜಿಯಾಗದೆ ತಮ್ಮ ಸಮಾಜ ಪರ ಅವರು ಮಾಡಿರುವ ಹೋರಾಟ, ಕೆಲಸಗಳೇ ಕಾರಣ ಎಂದು ಬೊಮ್ಮಾಯಿ ಹೇಳಿದರು.
ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡಿದ್ದಾರೆ. ಪ.ಜಾ. ಮತ್ತು ಪ.ಪಂಗಡಕ್ಕೆ ವ್ಯವಸ್ಥೆಯಲ್ಲಿ ಅನ್ಯಾಯವಾದಾಗ ಅವರ ರಕ್ಷಣೆಗೆ ಕವಚವಾಗಿ ಮೀಸಲಾತಿ ಕಲ್ಪಿಸಿದ್ದಾರೆ. ನಮ್ಮದು ಜೀವಂತ ಸಂವಿಧಾನ. ಸಾಮಾಜಿಕ, ಆರ್ಥಿಕವಾಗಿ ದೇಶ, ಸಮಾಜ ಬದಲಾದಂತೆ, ಇದಕ್ಕೆ ಅನುಗುಣವಾಗಿ ಬದಲಾವಣೆಗೂ ಅವಕಾಶ ನೀಡಲಾಗಿದೆ.
ಹೀಗಾಗಿ ಹಕ್ಕುಗಳೂ ಬದಲಾಗುತ್ತವೆ. ಮೊದಲು ಶಿಕ್ಷಣ, ನಂತರ ಉದ್ಯೋಗಕ್ಕೆ ಬೇಡಿಕೆ ಶುರುವಾಯಿತು. 90ರ ದಶಕದಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣದಿಂದ ಸರಕಾರಿ ನೌಕರಿ ಕಡಿಮೆ ಆಗಿವೆ. ಆದರೂ, ಇನ್ನು ನಾವೆಲ್ಲರೂ ಅದರ ಬೆನ್ನು ಬಿದ್ದಿದ್ದೇವೆ ಎಂದರು.
ಕೈಗಾರಿಕೋದ್ಯಮಕ್ಕೆ ಪರಿಶಿಷ್ಟ ಜಾತಿ, ಪಂಗಡ ಜನರು ಹೆಚ್ಚು ಬರಬೇಕು. ಉದ್ಯೋಗದ ಬದಲು ಉದ್ಯಮ ಮಾಡಿದರೆ ಬೇರೆಯವರಿಗೆ ಉದ್ಯೊಗ ಕೊಡಬಹುದು. ಇಂದು ಶ್ರೀನಿವಾಸನ್ ಅವರ ಹೋರಾಟದ ಪರಿಣಾಮ 5 ಸಾವಿರ ದಲಿತ ಉದ್ಯಮಿಗಳಿದ್ದಾರೆ. ಇದು 10 ಸಾವಿರ ಆಗಲಿ. ಈ ಸರಕಾರದ ಬಳಿಯೂ ನಿಮ್ಮ ಹಕ್ಕು ಕೇಳಿ ಪಡೆಯಿರಿ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯದಲ್ಲಿ ನಮ್ಮ ಅವಧಿಯಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ ಪರಿಣಾಮ, 4 ಸಾವಿರಕ್ಕೂ ಹೆಚ್ಚು ಇಂಜಿನಿಯರ್‌ಗಳು, 400ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ಈ ಸಮುದಾಯಗಳಿಗೆ ಸಿಗುತ್ತಿವೆ. ಪ್ರತಿ ಜಿಲ್ಲೆಯಲ್ಲೂ ಯಶಸ್ವಿ ಉದ್ದಿಮೆದಾರ ಸೃಷ್ಟಿಸುವ ಕೆಲಸ ಸಂಘ ಮಾಡಲಿ. ದಲಿತ ಉದ್ದಿಮೆ ಕಾರ್ಯವೈಖರಿ ಇಲ್ಲಿಗೆ ಸೀಮಿತವಾಗದೆ, ಕೇಂದ್ರ ಸರಕಾರದ ಮಟ್ಟಕ್ಕೂ ತಿಳಿಯುವಂತೆ ಆಗಬೇಕು. ನಿಮ್ಮ ಜತೆಗೆ ನಾವಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಸಂಸದರಾದ ಜಗದೀಶ್ ಶೆಟ್ಟರ್, ಕುಮಾರನಾಯ್ಕ್, ಮಲ್ಲೇಶ್ ಬಾಬು, ಶಾಸಕರಾದ ಎ.ಸಿ.ಶ್ರೀನಿವಾಸ್, ವೆಂಕಟೇಶ್, ಪರಿಷತ್ ಸದಸ್ಯ ಸುಧಾಮ್ ದಾಸ್, ನಿವೃತ್ತ ಮುಖ್ಯಕಾರ್ಯದರ್ಶಿ ರತ್ನಪ್ರಭಾ, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಇ.ವೆಂಕಟಯ್ಯ ಇತರರು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಂದರೆ, ಭಾರತದ ದಲಿತ ಉದ್ದಿಮೆದಾರರ ಸಂಘವನ್ನು ರಚನೆ ಮಾಡುವ ಕನಸು ಕಟ್ಟಿದ್ದೇನೆ. ಇದಕ್ಕಾಗಿ ಕರ್ನಾಟಕದಿಂದ ದಿಲ್ಲಿಗೆ ಹೋಗಿರುವ ಕೇಂದ್ರ ಸಚಿವರು, ಸಂಸದರ ಸಹಕಾರ ಬೇಕಾಗಿದೆ. ಜಾತಿ ರಹಿತ ಸಮಾಜ ನಿರ್ಮಾಣ ಮಾಡುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕನಸಾಗಿತ್ತು. ಆದರೆ, ಇಂದು ಜಾತಿ ಸಹಿತ ಸಮಾಜವಾಗುತ್ತಿರುವುದು ದುರಂತ. ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಬಲ್ಕ್ ಅಲಾಟ್ಮೆಂಟ್‌ನಲ್ಲಿ ಶೇ.24.1ಮೀಸಲಾತಿಯನ್ನು ಸರಕಾರ ನೀಡಬೇಕು ಎಂದು ರಾಜ್ಯ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್ ಮನವಿ ಮಾಡಿದರು.






