ಅಧಿವೇಶನ | ಡ್ರಗ್ಸ್ ತಡೆಗಟ್ಟಲು ಚರ್ಚೆಗೆ ಅವಕಾಶ : ಬಸವರಾಜ ಹೊರಟ್ಟಿ

ಬೆಂಗಳೂರು : ವಿಧಾನ ಪರಿಷತ್ತಿನ ಅಧಿವೇಶನವು ಮಾ.3ರಿಂದ ಆರಂಭವಾಗಲಿದ್ದು, ಹದಿಹರೆಯದ ಮಕ್ಕಳು ಅನುಭವಿಸುತ್ತಿರುವ ಸವಾಲುಗಳು ಹಾಗೂ ಯುವ ಪೀಳಿಗೆಯು ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿರುವುದನ್ನು ತಡೆಗಟ್ಟಲು ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಶನಿವಾರ ವಿಧಾನಸೌಧ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾ.3ರಿಂದ 21 ರವರೆಗೆ ಸರಕಾರಿ ರಜೆ ದಿನಗಳು ಹೊರತುಪಡಿಸಿ ಒಟ್ಟು 15 ದಿನಗಳು ಅಧಿವೇಶನದ ಕಾರ್ಯಕಲಾಪಗಳು ನಡೆಯಲಿವೆ. ಅದರಲ್ಲೂ ಸೋಮವಾರ ರಾಜ್ಯಪಾಲರು ಉಭಯಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಕಳೆದ ಅಧಿವೇಶನದಿಂದೀಚೆಗೆ ಅಗಲಿದ ಗಣ್ಯ ವ್ಯಕ್ತಿಗಳಿಗೆ ಸಂತಾಪ ಸೂಚನೆ ಸಲ್ಲಿಸಲಾಗುವುದು ಎಂದರು.
ಈ ಬಾರಿ ಅಧಿವೇಶನದಲ್ಲಿ ಹೊಸ ವಿಷಯಗಳ ಚರ್ಚೆಗೆ ಅವಕಾಶ ನೀಡಲಾಗಿದ್ದು, “ಹದಿಹರೆಯದ ಮಕ್ಕಳು ಅನುಭವಿಸುತ್ತಿರುವ ಸವಾಲುಗಳು, ಪ್ರತಿಸ್ಪಂದನೆಗಳು ಮತ್ತು ಪರಿಹಾರೋಪಾಯಗಳ” ಕುರಿತು ಚರ್ಚಿಸಲು ಮಕ್ಕಳ ಹಕ್ಕುಗಳ ಶಾಸಕರ ವೇದಿಕೆಯ ವತಿಯಿಂದ ಮನವಿಯನ್ನು ಸ್ವೀಕರಿಸಲಾಗಿದೆ. ಈ ಪ್ರಸ್ತಾವನೆಯನ್ನು ಕಾರ್ಯಕಲಾಪಗಳ ಸಮಿತಿಯ ಮುಂದೆ ಮಂಡಿಸಿ, ಸಮಿತಿಯ ನಿರ್ಣಯದಂತೆ ಕ್ರಮವಹಿಸಲಾಗುವುದು ಎಂದು ವಿವರಿಸಿದರು.
ಅದೇ ರೀತಿ ಮಾದಕ ವಸ್ತುಗಳ ಬಳಕೆಗೆ ಯುವ ಪೀಳಿಗೆಯು ಪ್ರೇರಿತರಾಗುತ್ತಿರುವುದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಆತಂಕಕಾರಿ ವಿಷಯ. “ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ಯುವ ಪೀಳಿಗೆಯು ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿರುವುದನ್ನು ತಡೆಗಟ್ಟುವ” ಕುರಿತು ಚರ್ಚಿಸಲು ಕಾಲಾವಕಾಶವನ್ನು ಕಾರ್ಯಕಲಾಪಗಳ ಸಮಯದಲ್ಲಿ ಮೀಸಲಿಡುವ ಬಗ್ಗೆ ಸಮಿತಿಯ ಮುಂದೆ ಮಂಡಿಸಿ, ಸಮಿತಿಯ ನಿರ್ಣಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಅಧಿವೇಶನಕ್ಕೆ ಈವರೆಗೆ ಪ್ರಶ್ನೋತ್ತರಗಳು ಒಟ್ಟು 693 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 431 ಚುಕ್ಕೆ ಗುರುತಿನ ಹಾಗೂ 262 ಚುಕ್ಕೆ ರಹಿತ ಸ್ವೀಕರಿಸಲಾಗಿದೆ. ನಿಯಮ 72ರ ಅಡಿಯಲ್ಲಿ 57 ಸೂಚನೆಗಳನ್ನು ಸ್ವೀಕರಿಸಲಾಗಿರುತ್ತದೆ. ನಿಯಮ 330ರ ಅಡಿಯಲ್ಲಿ ಬಂದಂತಹ 24 ಸೂಚನೆಗಳನ್ನು ಸ್ವೀಕರಿಸಲಾಗಿರುತ್ತದೆ ಎಂದ ಅವರು, ಸರಕಾರದಿಂದ ಸ್ವೀಕೃತವಾಗಲಿರುವ ವಿಧೇಯಕಗಳ ಮಂಡನೆ, ಚರ್ಚೆ ಹಾಗೂ ಅಂಗೀಕಾರ, ಆಧ್ಯಾದೇಶಗಳ ವಿಧೇಯಕಗಳು, ಸದಸ್ಯರ ಖಾಸಗಿ ಕಾರ್ಯಕಲಾಪಗಳು, ಬದಲಿ ವಿಧೇಯಕಗಳು, ಸದಸ್ಯರ ಖಾಸಗಿ ಕಾರ್ಯಕಲಾಪಗಳು ಸೇರಿದಂತೆ ಕಾರ್ಯಕಲಾಪಗಳ ಸಲಹಾ ಸಮಿತಿಯ ತೀರ್ಮಾನದಂತೆ ಇನ್ನಿತರೆ ವಿಷಯಗಳ ಮೇಲಿನ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಸಚಿವ ಎಚ್.ಕೆ. ಪಾಟೀಲ್ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಸಮಯಾವಕಾಶ ನೋಡಿಕೊಂಡು ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು. ಸದನ ಆರಂಭಕ್ಕೂ ಮುನ್ನ ವಿಧಾನ ಪರಿಷತ್ತಿನ ಆಡಳಿತ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷಗಳ ನಾಯಕರೊಂದಿಗೆ ಹಾಗೂ ಪರಿಷತ್ತಿನ ಸದಸ್ಯರೊಂದಿಗೆ ಮಾತನಾಡಿ, ಸದನವನ್ನು ಸುಗಮವಾಗಿ ನಡೆಸಲು ಕ್ರಮವಹಿಸಲಾಗುವುದು ಎಂದೂ ಅವರು ಉಲ್ಲೇಖಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಸೇರಿದಂತೆ ಪ್ರಮುಖರಿದ್ದರು.
ರಾಜೀನಾಮೆ ನೀಡಿ ಹೋಗುವೆ: ವಿಧಾನಪರಿಷತ್‍ಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ 4 ಮಂದಿ ಸದಸ್ಯರನ್ನು ನೇಮಿಸಿದರೆ ಬಹುಮತ ಪಡೆದುಕೊಳ್ಳುತ್ತದೆ. ಒಂದು ವೇಳೆ ಆಗ ತಮ್ಮ ವಿರುದ್ಧ ಅವಿಶ್ವಾಸ ಸೂಚನೆ ನೀಡಿದರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ. ನನಗೆ ಯಾವುದೇ ಅಧಿಕಾರದ ವ್ಯಾಮೋಹ ಇಲ್ಲ. ಸಾಮಾನ್ಯ ಕುಟುಂಬದಿಂದ ಬಂದವನು. ಶಿಕ್ಷಕನಾಗಿದ್ದ ನಾನು ಸಚಿವನಾಗಿ, ಸಭಾವತಿಯಂತಹ ಉನ್ನತ ಹುದ್ದೆಯಲ್ಲಿದ್ದೇನೆ. ನನಗೆ ಈ ಬಗ್ಗೆ ತೃಪ್ತಿ ಇದೆ ಎಂದು ಬಸವರಾಜ ಹೊರಟ್ಟಿ ನುಡಿದರು.







