ರಾಜ್ಯದ ಇತಿಹಾಸದಲ್ಲಿ ಅಪರೂಪದ ಸಾಧನೆ: ಸಿದ್ದರಾಮಯ್ಯ ನಾಯಕತ್ವಕ್ಕೆ ಬಸವರಾಜ ಹೊರಟ್ಟಿ ಮೆಚ್ಚುಗೆ

ಬಸವರಾಜ ಹೊರಟ್ಟಿ
ಬೆಂಗಳೂರು : ಸಂವಿಧಾನದ ಆಶಯಗಳನ್ನು ನೆಲೆಗೊಳಿಸಿಕೊಂಡು, ಸಮಾನತೆ, ಸ್ವಾಭಿಮಾನ ಮತ್ತು ಮಾನವೀಯ ಮೌಲ್ಯಗಳನ್ನು ಆಡಳಿತದ ಕೇಂದ್ರ ಬಿಂದುಗೊಳಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ವೈಶಿಷ್ಟ್ಯವಾಗಿದೆ ಎಂದು ಪರಿಷತ್ತಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕರ್ನಾಟಕದ ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿ ಒಟ್ಟು 7 ವರ್ಷ 240 ದಿನಗಳ ಸುದೀರ್ಘ ಅವಧಿಗೆ ಜನರ ಸೇವೆಯಲ್ಲಿ ಮುಂದುವರೆಯುತ್ತಾ ರಾಜ್ಯದ ಆಡಳಿತ ಇತಿಹಾಸದಲ್ಲಿ ಅಪರೂಪದ ಹಾಗೂ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ಈ ಅವಧಿಯಲ್ಲಿ ತಾವು ಪ್ರದರ್ಶಿಸಿರುವ ಮತ್ತು ಪ್ರದರ್ಶಿಸುತ್ತಿರುವ ದಿಟ್ಟ ನಾಯಕತ್ವ, ದೂರದೃಷ್ಟಿಯ ಆಡಳಿತ ಮತ್ತು ಜನಪರ ಬದ್ಧತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರವಾದ ಅಡಿಪಾಯವನ್ನು ನಿರ್ಮಿಸಿದೆ. ತಮ್ಮ ಆಡಳಿತ ಕಾಲದಲ್ಲಿ ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಲ್ಲದೇ ಕಾರ್ಯರೂಪಕ್ಕೆ ಬಂದಿದ್ದು, ಸಮಾಜದ ಅಂಚಿನಲ್ಲಿರುವ ವರ್ಗಗಳಾದ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು ಹಾಗೂ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳು ನೇರವಾಗಿ ತಲುಪುವಂತೆ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು, ಗ್ಯಾರಂಟಿ ಯೋಜನೆಗಳು, ಆರೋಗ್ಯ ಕ್ಷೇತ್ರದಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆಯನ್ನು ತಲುಪಿಸುವ ಯೋಜನೆಗಳು, ಆಹಾರ ಭದ್ರತೆ ಮೂಲಕ ಬಡವರ ಬದುಕಿಗೆ ನೆಮ್ಮದಿ ನೀಡಿದ ಕಾರ್ಯಗಳು ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಹಳ್ಳಿಗಳ ಸಬಲೀಕರಣಕ್ಕೆ ನೀಡಿದ ಒತ್ತು ರಾಜ್ಯದ ಅಭಿವೃದ್ಧಿಗೆ ಹೊಸ ಚೈತನ್ಯವನ್ನು ತಂದಿದೆ. ಜೊತೆಗೆ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಜನಕಲ್ಯಾಣಕ್ಕೆ ಆದ್ಯತೆ ನೀಡಿರುವುದು ನಿಮ್ಮ ಆಡಳಿತದ ಮಹತ್ವದ ಸಾಧನೆಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪಾರದರ್ಶಕತೆ, ನೈತಿಕತೆ ಮತ್ತು ಜವಾಬ್ದಾರಿಯುತ ಆಡಳಿತವನ್ನು ತಾವು ಸದಾ ಪ್ರಾಮುಖ್ಯತೆಯಿಂದ ಅನುಸರಿಸಿದ್ದು, ಸರಕಾರದ ಮೇಲಿನ ಜನರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜನಸಾಮಾನ್ಯರೊಂದಿಗೆ ನೇರ ಸಂವಾದ, ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮನೋಭಾವ ಮತ್ತು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ತಮ್ಮ ಪ್ರಯತ್ನಗಳು ತಮಗೆ "ಜನನಾಯಕ” ಎಂಬ ಗೌರವವನ್ನು ತಂದುಕೊಟ್ಟಿರುವುದು ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿರುತ್ತದೆ.
ಮುಂದಿನ ದಿನಗಳಲ್ಲಿಯೂ ನಿಮ್ಮ ಅಪಾರ ಅನುಭವ, ದೂರದೃಷ್ಟಿಯ ನಾಯಕತ್ವ ಮತ್ತು ಜನಪರ ಬದ್ಧತೆ ಕರ್ನಾಟಕ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲಿ ಎಂದು ಅವರು ಶುಭ ಹಾರೈಸಿದ್ದಾರೆ.







