Bengaluru | ಬಿಜೆಪಿ ಕಾರ್ಯಕರ್ತರ ವಾಹನಗಳಲ್ಲಿ ಮಾರಕಾಸ್ತ್ರ ಪತ್ತೆ ಆರೋಪ: ದೂರು

ಬೆಂಗಳೂರು : ಪ್ರತಿಭಟನೆಯ ವೇಳೆ ಸ್ಥಳಕ್ಕೆ ಬಂದಿದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ವಾಹನಗಳಲ್ಲಿ ಮಾರಕಾಸ್ತ್ರಗಳಿದ್ದು, ಕೂಡಲೇ ತಪಾಸಣೆ ನಡೆಸಿ ಕಾನೂನು ಕ್ರಮ ಕೈಗೊಳಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಆಗ್ರಹಿಸಿದೆ.
ಬುಧವಾರ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಿಜೆಪಿ ಪಕ್ಷದ ಇತರ ನಾಯಕರೊಂದಿಗೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ.ಅಶ್ವಥ್‌ನಾರಾಯಣ, ವಿಶ್ವನಾಥ್ ಮತ್ತು ಅವರೊಂದಿಗೆ ಬಂದ ಇತರರ ವಾಹನಗಳಲ್ಲಿ ಮಾರಕಾಸ್ತ್ರ ಹಾಗೂ ಆಯುಧಗಳಿರುವ ಬಗ್ಗೆ ಮಾಹಿತಿ ದೊರಕಿದ್ದು, ಈ ಬಗ್ಗೆ ಕೂಡಲೇ ತಪಾಸಣೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ, ಸಂಬಂಧಿತ ವಾಹನವನ್ನು ಕಾನೂನುಬದ್ದವಾಗಿ ತಪಾಸಣೆಗೆ ಒಳಪಡಿಸಬೇಕು. ಯಾವುದೇ ನಿಷೇಧಿತ ಅಥವಾ ಕಾನೂನುಬಾಹಿರ ವಸ್ತುಗಳು ಇರುವುದೇ ಎಂಬುದರ ಕುರಿತು ನಿಷ್ಪಕ್ಷ ತನಿಖೆ ನಡೆಸಬೇಕು. ಹಾಗೆಯೇ ಆರ್.ಅಶೋಕ್ ಅವರು ‘ಲಾಂಗು, ಮಚ್ಚು’ ಉಲ್ಲೇಖಿಸಿ ನೀಡಿದ ಹೇಳಿಕೆಯನ್ನಾಧರಿಸಿ, ಅವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.




