Bengaluru | ಯುವಕರ ಮೇಲೆ ಬ್ಯಾಟ್‍ನಿಂದ ಹಲ್ಲೆ; ಎಫ್‍ಐಆರ್ ದಾಖಲು

ಬೆಂಗಳೂರು : ಅಪರಿಚಿತನೊರ್ವ ಇಬ್ಬರು ಯುವಕರನ್ನು ‘ನೀವು ಭಯೋತ್ಪಾದಕರೇ’ ಎಂದು ಪ್ರಚೋದನಾತ್ಮಕವಾಗಿ ಪ್ರಶ್ನಿಸಿದ್ದಲ್ಲದೇ, ಯುವಕರ ಮೇಲೆ ಬ್ಯಾಟ್‍ನಿಂದ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂದೀಪ್ ಕುಮಾರ್(27) ಹಾಗೂ ರೋಹಿತ್ ಕುಮಾರ್(26) ಹಲ್ಲೆಗೊಳಗಾದ ಯುವಕರು ಎಂದು ತಿಳಿದು ಬಂದಿದೆ.
ಎಚ್‍ಎಎಲ್‍ನ ಎಇಸಿಎಸ್ ಲೇಔಟ್‍ನಲ್ಲಿನ ಪೋಲಾರ್ ಬಿಯರ್ ಐಸ್‍ಕ್ರೀಮ್ ಅಂಗಡಿಯ ಮುಂಭಾಗ ತಮ್ಮ ಸ್ನೇಹಿತನಿಗಾಗಿ ಸಂದೀಪ್ ಕುಮಾರ್ ಹಾಗೂ ರೋಹಿತ್ ಕುಮಾರ್ ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದಿದ್ದ ಆರೋಪಿಯು ಯುವಕರನ್ನು ‘ನೀವು ಭಯೋತ್ಪಾದಕರಾ? ನಿಮ್ಮ ಗುರುತಿನ ಚೀಟಿಯನ್ನು ತೋರಿಸಿ’ ಎಂದು ಕೇಳಿದ್ದಾನೆ.
ಈ ವೇಳೆ ಯುವಕರು ‘ಯಾವ ಅಧಿಕಾರದ ಮೇರೆಗೆ ಕೇಳುತ್ತಿದ್ದೀರಿ?’ ಎಂದು ಆರೋಪಿಯನ್ನು ಪ್ರಶ್ನಿಸಿದ್ದಾರೆ. ಕೋಪಗೊಂಡ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಕಾರಿನಲ್ಲಿದ್ದ ಬೇಸ್‍ಬಾಲ್ ಬ್ಯಾಟ್‍ನಿಂದ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯ ದೃಶ್ಯಗಳು ಬ್ಯಾಂಕ್‍ನ ಸಿಸಿಟಿವಿ ಹಾಗೂ ಮೊಬೈಲ್ ಫೋನ್‍ನಲ್ಲಿ ಸೆರೆಯಾಗಿವೆ ಎಂದು ವರದಿಯಾಗಿದೆ.
ಹಲ್ಲೆಗೆ ಒಳಗಾದ ಯುವಕ ಸಂದೀಪ್ ಕುಮಾರ್ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನನ್ವಯ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಬಿಎನ್‍ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಪತ್ತೆ ಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






