Bengaluru | ವಿಧಾನಸೌಧದ ಮುಂಭಾಗ ಬಡಿದಾಡಿದ 11 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ವಿಧಾನಸೌಧ ಮುಂಭಾಗದ ರಸ್ತೆಯಲ್ಲಿ ಬಡಿದಾಡಿಕೊಂಡಿದ್ದ 11 ಆರೋಪಿಗಳನ್ನು ಇಲ್ಲಿನ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಉಪೇಂದ್ರ ಚೌಲಗಾಯ್, ಮನೋಜ್ ಶಾಹಿ, ಚವಿ ಖತ್ರಿ, ಸುದೀಪ್, ದಿನೇಶ್ ಕುನ್ವಾರ್, ಗೋಪಾಲ್ ಕ್ಸೆತ್ರಿ, ಧರ್ಮೇಂದರ್, ರಾಹುಲ್ ಸಿಂಗ್, ನಿರ್ಮಲ್, ಮನೋಜ್ ಕಠಾಯುತ್ ಹಾಗೂ ಪರಶ್ ಬೊಹ್ರಾ ಬಂಧಿತರು ಎಂದು ಗುರುತಿಸಲಾಗಿದೆ.
ನ.16ರ ರವಿವಾರ ಸಂಜೆ ವಿಧಾನಸೌಧದ ಮುಂದಿರುವ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಆರೋಪಿಗಳು ಇದ್ದಕ್ಕಿದ್ದಂತೆ ಸಿಕ್ಕ ಸಿಕ್ಕ ವಸ್ತುಗಳಿಂದ ಬಡಿದಾಡಿಕೊಂಡಿದ್ದರು. ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಬೀಟ್ ಸಿಬ್ಬಂದಿ ಕೂಡಲೇ ಲಾಠಿ ಪ್ರಹಾರ ನಡೆಸುವ ಮೂಲಕ ಉದ್ರಿಕ್ತರ ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ಪ್ರಕರಣ ಬಗ್ಗೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ.ಹಕೇ ಮಾತನಾಡಿದ್ದು, ವಿಧಾನಸೌಧ ಮೆಟ್ರೋ ನಿಲ್ದಾಣದ ಸಮೀಪ ಒಂದಷ್ಟು ಹುಡುಗರು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಪರಿಶೀಲನೆ ಮಾಡುವಾಗ ಎರಡು ಗುಂಪುಗಳ ನಡುವೆ ಗಲಾಟೆ ಆಗಿರುವುದು ಗಮನಕ್ಕೆ ಬಂತು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದೇವೆ ಎಂದರು.





