ಗುರು, ಗುರಿಯ ದರ್ಶನ ನೀಡುವುದೇ ಧರ್ಮ ಸಭೆಯ ಉದ್ದೇಶ : ಪೀಟರ್ ಮಚಾದೋ

ಬೆಂಗಳೂರು : ಗುರು ಮತ್ತು ಗುರಿಯ ದರ್ಶನ ನೀಡುವುದೇ ಧರ್ಮ ಸಭೆಯ ಉದ್ದೇಶವಾಗಿದೆ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಅಭಿಪ್ರಾಯಪಟ್ಟರು.
ಶನಿವಾರ ಇಲ್ಲಿನ ಭಾರತೀ ನಗರದಲ್ಲಿನ ಸಂತ ಫ್ರಾನ್ಸಿಸ್ ಜೇವಿಯರ್ ಕೆಥೆಡ್ರಲ್ ಚರ್ಚ್‍ನಲ್ಲಿ ನಡೆದ ಸುಮಾರು 400 ಪಾದ್ರಿಗಳ ಧರ್ಮಾಧ್ಯಕ್ಷೀಯ ದೀಕ್ಷೆಯ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಯಶಸ್ಸು ಕಾಣಲು ಗುರು ಮತ್ತು ಗುರಿ ಬಹುಮುಖ್ಯ. ಇಂತಹ ಧರ್ಮ ಕಾರ್ಯಕ್ರಮಗಳಲ್ಲಿ ಗುರುಗಳು ಗುರಿಯನ್ನು ತೋರುತ್ತಾರೆ. ಅದು ಬದುಕಿನ ದಾರಿಯೂ ಹೌದು. ಯಾವುದನ್ನು ಆಯ್ಕೆ ಮಾಡಬೇಕು, ಹೇಗೆ ನಡೆಯಬೇಕು ಎಂಬುದು ಸ್ಪಷ್ಟಗೊಳ್ಳುತ್ತದೆ ಎಂದರು.
ನೂತನ ಸಹಾಯಕ ಧರ್ಮಾಧ್ಯಕ್ಷರನ್ನು ಅವರ ಭಾಷಾ ಸಾಮರ್ಥ್ಯ, ಬೌದ್ಧಿಕ ಸಾಮರ್ಥ್ಯ, ಅಥವಾ ಅವರ ಆಡಳಿತಾತ್ಮಕ ಸಾಮರ್ಥ್ಯದ ಆಧಾರದ ಮೇಲೆ ಆರಿಸಲಾಗಿಲ್ಲ. ಬದಲಿಗೆ ಅವರ ದೀನತೆ ಹಾಗೂ ಸರಳತೆಯ ಆಧಾರದ ಮೇಲೆ ಆರಿಸಿಕೊಳ್ಳಲಾಗಿದೆ. ಈ ಸಹಾಯಕ ಧರ್ಮಾಧ್ಯಕ್ಷರು ಭಾಷೆ, ಸಂಸ್ಕೃತಿ ಅಥವಾ ಸಂಪ್ರದಾಯಕ್ಕಿಂತ ಮಿಗಿಲಾಗಿ ನಿಮಗೆ ಸೇವೆಯನ್ನು ಸಲ್ಲಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಮಹಾಧರ್ಮಕ್ಷೇತ್ರದ ನಿವೃತ್ತ ಆರ್ಚ್ ಬಿಷಪ್ ಡಾ.ಬರ್ನಾಡ್ ಮೊರಾಸ್, ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ತೋಮಾಸಪ್ಪ ಅಂತೋಣಿಸ್ವಾಮಿ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಜೆರಾಲ್ಟ್ ಐಸಾಕ್ ಲೋಬೋ, ತಮಿಳುನಾಡಿನ ಧರ್ಮಪುರಿ ಧರ್ಮಕ್ಷೇತ್ರ ಧರ್ಮಾಧ್ಯಕ್ಷ ಡಾ.ಲಾರೆನ್ಸ್ ಪಿಯುಸ್, ಜೆ.ಎ ಕಾಂತರಾಜ್, ಆರೋಕ್ಯರಾಜ್ ಸತೀಶ್ ಕುಮಾರ್, ಜೋಸೆಫ್ ಸೂಸೈನಾದನ್ ಸೇರಿದಂತೆ ಪ್ರಮುಖರಿದ್ದರು.







