ಬೆಂಗಳೂರು | ಸ್ನೇಹಿತನ ಕೊಲೆಗೈದ ಪ್ರಕರಣ : ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಅಂತಿಮ ದರ್ಶನಕ್ಕೆ ಬಂದಾಗ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನು ಕೊಲೆಗೈದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಇಲ್ಲಿನ ಕಾಟನ್ಪೇಟೆ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಶರತ್(26), ನಿರಂಜನ್(19), ದೀಪಕ್(24) ಹಾಗೂ ಮನೋಜ್ ಕುಮಾರ್(20) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆ.22ರಂದು ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ನಲ್ಲಿ ಶರತ್ ಎಂಬಾತನಿಗೆ ಚಾಕು ಇರಿದು ಹತ್ಯೆಗೈಯಲಾಗಿತ್ತು.
ಮೃತ ಶರತ್ ಹಾಗೂ ಆರೋಪಿಗಳು ಒಂದೇ ಏರಿಯಾದವರು. ಆ.21ರಂದು ಪರಿಚಿತರೊಬ್ಬರ ಸಾವು ಸಂಭವಿಸಿದ್ದರಿಂದ ಶರತ್ ಹಾಗೂ ಆರೋಪಿಗಳು ಅಂತಿಮ ದರ್ಶನ ಪಡೆಯಲು ಅಂಜನಪ್ಪ ಗಾರ್ಡನ್ಗೆ ಬಂದಿದ್ದರು. ಬೆಳಗಿನಜಾವ ವಾಪಸ್ ತೆರಳುವಾಗ ಕೊಲೆಯಾದ ಶರತ್, ಆರೋಪಿ ಶರತ್ನ ಪತ್ನಿಗೆ ಅವಾಚ್ಯವಾಗಿ ನಿಂದಿಸಿದ್ದ ಎನ್ನಲಾಗಿದೆ.
ಈ ವಿಚಾರವಾಗಿ ಶರತ್ ಹಾಗೂ ಆರೋಪಿಗಳ ನಡುವೆ ವಾಗ್ವಾದ ಆರಂಭವಾದಾಗ ಕೊಲೆಯಾದ ಶರತ್, ಆರೋಪಿ ಶರತ್ನ ಪತ್ನಿಯ ಕೂದಲು ಹಿಡಿದು ಎಳೆದಾಡಿದ್ದ. ಈ ವೇಳೆ ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಕಳಿಸಿದ್ದರು ಎನ್ನಲಾಗಿದೆ.
ಅಂತಿಮ ವಿಧಿವಿಧಾನ ಮುಗಿಸಿದ ಬಳಿಕ ಆರೋಪಿಗಳು ಶರತ್ನ ಬಳಿ ಮತ್ತೆ ಜಗಳ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿದಾಗ ಆರೋಪಿಗಳಾದ ಶರತ್ ಹಾಗೂ ನಿರಂಜನ್, ಶರತ್ಗೆ ಚಾಕುವಿನಿಂದ ಇರಿದಿದ್ದರು. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ.
ಈ ಕುರಿತು ಪ್ರಕರಣ ದಾಖಲಿಕೊಂಡಿದ್ದ ಕಾಟನ್ ಪೇಟೆ ಠಾಣಾ ಪೊಲೀಸರು ಪ್ರಮುಖ ಆರೋಪಿಗಳಾದ ಶರತ್, ನಿರಂಜನ್ ಹಾಗೂ ಅವರಿಗೆ ಸಾಥ್ ನೀಡಿದ್ದ ದೀಪಕ್, ಮನೋರಂಜನ್ ಎಂಬ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಮಾಹಿತಿ ನೀಡಿದ್ದಾರೆ.







