ಸರಕಾರದ ದಲಿತ ವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಸಮಾವೇಶ
‘ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ’ : ಅಹಿಂದ ಒಕ್ಕೂಟ ಕರೆ

ಬೆಂಗಳೂರು : ಎಸ್‍ಸಿಎಸ್‍ಪಿ-ಟಿಎಸ್‍ಪಿ ಹಣ ಲೂಟಿ, ಒಳ ಮೀಸಲಾತಿ ಅನುಷ್ಠಾನಕ್ಕೆ ಮೀನಾಮೇಷ, ವಾಲ್ಮೀಕಿ ನಿಗಮದ ಹಗರಣ ಸೇರಿ ಹಲವಾರು ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ‘ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ’ ಆಂದೋಲನಕ್ಕೆ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ನಾಯಕರು ಕರೆ ನೀಡಿದ್ದಾರೆ.
ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ದಲಿತರ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ, ರಾಜ್ಯ ಕಾಂಗ್ರೆಸ್ ಸರಕಾರ ತೊಲಗಲಿ ಎಂದು ಅಹಿಂದ ನಾಯಕರು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ, ದಲಿತ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ, ಆ ಜಾಥಾ, ಈ ಜಾಥಾ ಎಂದು ಹಣ ಕೊಟ್ಟು ಬಾಡಿಗೆ ಕಾರ್ಯಕರ್ತರರನ್ನು ಕರೆತರುವ ಹೋರಾಟ ನಮ್ಮದಲ್ಲ. ಹಿಂದಿನ ಸರಕಾರ ಹಾಗೂ ಈಗಿನ ಸರಕಾರ ಹೊರಡಿಸಿರುವ ದಲಿತರ ಹಣದ ಅಂಕಿ-ಅಂಶಗಳ ಆಧಾರದಲ್ಲಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿದರು.
ಸರಕಾರಗಳ ದಲಿತ ವಿರೋಧಿ ನಡೆಯ ವಿರುದ್ಧ ಪ್ರತಿರೋಧವೊಂದು ಹುಟ್ಟಿಕೊಳ್ಳಬೇಕಿತ್ತು. ಈ ಸಮಾವೇಶದಿಂದ ಅದು ಪ್ರಾರಂಭಗೊಂಡಿದೆ. ಹಿಂದಿನ ಸರಕಾರ ದಲಿತರ 2 ಲಕ್ಷದ 56 ಸಾವಿರ ಕೋಟಿ ರೂ.ಗಳನ್ನು ಅಪಹರಣ ಮಾಡಿದೆ. ಅದನ್ನು ಸರಿಪಡಿತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ದಲಿತರ 26 ಸಾವಿರ ಕೋಟಿ ರೂ.ಗಳನ್ನು ಲೂಟಿ ಹೊಡೆದಿದೆ. ಈ ಹಣವನ್ನು ಯಾವುದಕ್ಕೆ ಬಳಸಲಾಗಿಯೆಂದು ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು ಎಂದು ಕೋಟಿಗಾನಹಳ್ಳಿ ರಾಮಯ್ಯ ಆಗ್ರಹಿಸಿದರು.
ಒಕ್ಕೂಟದ ರಾಜ್ಯ ಸಂಚಾಲಕ ಬಿ.ಆರ್.ಭಾಸ್ಕರ್ ಪ್ರಸಾದ್, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ದಲಿತರಿಗೆ ಮೀಸಲಿಟ್ಟ ಎಸ್‍ಸಿಎಸ್‍ಪಿ-ಟಿಎಸ್‍ಪಿ ಅನುದಾನದಲ್ಲಿ 26 ಸಾವಿರ ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಪ್ರತಿ ನಿತ್ಯ ದಲಿತರ ಮೇಲೆ ಕೊಲೆ ಮತ್ತು ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ರಕ್ಷಣೆಗೆ ಸರಕಾರ ಮುಂದಾಗಿಲ್ಲ ಎಂದರು.
ವಕೀಲ ಪ್ರೊ.ಹರಿರಾಮ್ ಮಾತನಾಡಿ ದಲಿತರ ದೌರ್ಜನ್ಯ ಪ್ರಕರಣಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಹೇಳಿದ ಸರಕಾರ ಈವರೆಗೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಈ ಸರಕಾರ ಬಂದಾಗಿನಿಂದ ಜಾತಿ ನಿಂದನೆ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಪೌರಕಾರ್ಮಿರ ಸೇವೆಯನ್ನು ಖಾಯಂಗೊಳಿಸಿಲ್ಲ. ಲಕ್ಷಾಂತರ ಬ್ಯಾಕ್ ಲಾಗ್ ಹುದ್ದೆಗಳು ಬಾಕಿ ಉಳಿದಿವೆ ಎಂದು ಹೇಳಿದರು.
ಪಿಟಿಸಿಎಲ್ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ಪ್ರಬುದ್ಧ ಯೋಜನೆಯಡಿ ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಐಎಎಸ್ ಅಧಿಕಾರಿ ಮಣಿವಣ್ಣನ್ ದಲಿತ ವಿರೋಧಿಯಾಗಿದ್ದು, ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿ ಮುಂದುವರೆಸಿರುವುದು ಸರಿಯಲ್ಲ. ವಿದ್ಯಾರ್ಥಿವೇತನ, ವಿಧ್ಯಾರ್ಥಿ ನಿಲಯಗಳ ದುರವಸ್ಥೆ, ವಿದ್ಯಾರ್ಥಿಗಳ ಉತ್ತೇಜನಕ್ಕೆ ಮೀಸಲಾದ ಹಣ ದುರುಪಯೋಗವಾಗುತ್ತಿದೆ ಎಂದು ಹರಿರಾಮ್ ಕಿಡಿಕಾರಿದರು.
ಪರಿಶಿಷ್ಠ ವರ್ಗಗಳಿಗೆ ಮೀಸಲಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿದ್ದು, ಒಳಮೀಸಲಾತಿ ಜಾರಿಗೆ ಸರಕಾರ ಮೀನಮೇಷ ಎಣಿಸುತ್ತಿದೆ. ಹಕ್ಕು ಪತ್ರಕ್ಕಾಗಿ 94ಸಿ, ಫಾರಂ 53,57 ಅಡಿ ಹಾಕಿಕೊಂಡಿರುವ ದಲಿತರ ಅರ್ಜಿಗಳನ್ನು ಇನ್ನೂ ವಿಲೇವಾರಿ ಮಾಡಿಲ್ಲ. ಅರಣ್ಯ ಹಕ್ಕಿನಡಿ ಅರ್ಜಿ ಹಾಕಿರುವ ಬಡ ಕುಟುಂಬಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಹಕ್ಕು ಪತ್ರ ವಿತರಿಸಬೇಕು. ಬಲಾಢ್ಯರು ಒತ್ತುವರಿ ಮಾಡಿರುವ ಸರಕಾರಿ ಭೂಮಿಗಳನ್ನು ತೆರವುಗೊಳಿಸಿ ಬಡಜನರಿಗೆ ನೆಲ ಮತ್ತು ನೆಲೆ ಒದಗಿಸಬೇಕು ಎಂದು ಹರಿರಾಮ್ ಆಗ್ರಹಿಸಿದರು.
ನಟ ಚೇತನ್ ಅಹಿಂಸಾ ಮಾತನಾಡಿ, ‘ನೀವು ನದಿಯಲ್ಲಿ ಕೊಚ್ಚಿ ಹೋಗುವ ಮಣ್ಣಾಗಬೇಡಿ, ನದಿಯ ದಿಕ್ಕು ಬದಲಾಯಿಸುವ ಬಂಡೆಯಾಗಿ’ ಎನ್ನುವ ಅಂಬೇಡ್ಕರ್ ಮಾತಿನಂತೆ ಶೋಷಿತರು ವ್ಯವಸ್ಥೆಯ ಅನ್ಯಾಯ, ದಬ್ಬಾಳಿಕೆಯ ವಿರುದ್ಧ ಸೆಟೆದು ನಿಲ್ಲಬೇಕು. ದಲಿತರ ಹಣ ನುಂಗುತ್ತಿರುವ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಕಾಂಗ್ರೆಸ್ ಸರಕಾರ ದಲಿತರ ಪರವಾಗಿ ಯಾವತ್ತೂ ಇಲ್ಲ. ಇದನ್ನು ದಲಿತ ಸಹೋದರರು ಅರ್ಥೈಸಿಕೊಳ್ಳಬೇಕು ಎಂದರು.
ಪ್ರತಿಭಟನಾ ಸಮಾವೇಶದಲ್ಲಿ ಹಿರಿಯ ನ್ಯಾಯವಾದಿ ಎಸ್.ಬಾಲನ್, ದಸಂಸ(ಭೀಮವಾದ)ದ ರಾಜ್ಯ ಸಂಚಾಲಕ ಮೋಹನ್ ರಾಜ್, ಅಹಿಂದ ಒಕ್ಕೂಟದ ಸಂಚಾಲಕರಾದ ಚಳುವಳಿ ರಾಜಣ್ಣ, ದಲಿತ ರಮೇಶ್, ಸಿದ್ದಾಪುರ
ಅಹಿಂದ ವರ್ಗಗಳ ಹೋರಾಟ, ಪ್ರೋತ್ಸಾಹದ ಬಲದಿಂದ ಸಿದ್ದರಾಮಯ್ಯ ಅವರು 2 ಬಾರಿ ಅಧಿಕಾರ ಅನುಭವಿಸುತ್ತಿದ್ದು, ಆದರೆ, ಈಗ ದಲಿತ ವರ್ಗಗಳ ತಟ್ಟೆಯಲ್ಲಿರುವ ಅನ್ನವನ್ನು ಕಸಿದುಕೊಂಡಿರುವುದು ಮಹಾ ಅಪರಾಧವಾಗಿದೆ. ದಲಿತ ವರ್ಗಗಳು ಮನಸ್ಸು ಮಾಡಿದರೆ ಸರಕಾರವನ್ನು ಕಿತ್ತು ಹಾಕುವ ಶಕ್ತಿಯಿದೆ ಎಚ್ಚರಿಕೆಯಿರಲಿ.
-ಕೋಟಿಗಾನಹಳ್ಳಿ ರಾಮಯ್ಯ, ಹಿರಿಯ ಸಾಹಿತಿ.







