ಹೊಸ ಕ್ರಿಮಿನಲ್ ಕಾಯಿದೆಗಳನ್ನು ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು : ಕೇಂದ್ರ ಸರಕಾರ ತಂದಿರುವ ಹೊಸ ಮೂರು ಕ್ರಿಮಿನಲ್ ಕಾಯಿದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದ ಸಿವಿಲ್ ಕೋರ್ಟ್ ಮುಂಬಾಗದಲ್ಲಿ ಜಾಯಿಂಟ್ ಆಕ್ಷನ್ ಫೋರಾಮ್ ಆಫ್ ಇಂಡಿಯನ್ ಅಸೋಸಿಯೇಷನ್ ಆಫ್ ಲಾಯರ್ಸ್ , ಆಲ್ ಇಂಡಿಯಾ ಲಾಯರ್ಸ್ ಯುನಿಯನ್, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಜಸ್ಟೀಸ್ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬುಧವಾರ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ವಕೀಲ ಕ್ಲಿಫ್ಟನ್, ಕೇಂದ್ರ ಸರಕಾರ ಸಂಸತ್ತಿನಲ್ಲಿ ಪ್ರಜಾಸತ್ತಾತ್ಮಕವಾಗಿ ಕಾನೂನುಗಳ ಕುರಿತು ಚರ್ಚೆ ಮಾಡದೆ, ವಿಪಕ್ಷದ 140ಕ್ಕೂ ಹೆಚ್ಚು ಸಂಸಂದರನ್ನು ಅಮಾನತ್ತು ಮಾಡಿದ್ದ ಸಂದರ್ಭದಲ್ಲಿ ಈ ಮೂರು ಕಾನೂನುಗಳನ್ನು ಜಾರಿ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆ. ಕಾಯಿದೆಗಳ ವಿರುದ್ಧ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ವಕೀಲರು ಸಂಘಟಿತರಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿಯವರೆಗೂ ಇದ್ದಂತಹ ಕ್ರಿಮಿನಲ್ ಕಾನೂನುಗಳು ಬ್ರಿಟಿಷರು ತಂದಿರುವಂತಹ ಕಾನೂನುಗಳಾಗಿತ್ತು. ಇದೀಗ ನಾವು ನಮ್ಮ ದೇಶಕ್ಕೆ ಅನುಗುಣವಾಗಿ ಕ್ರಿಮಿನಲ್ ಕಾನೂನುಗಳನ್ನು ತಂದಿದ್ದೇವೆ ಎಂದು ಕೇಂದ್ರ ಸರಕಾರ ಕಾನೂನುಗಳನ್ನು ತಂದಿರುವುದಕ್ಕೆ ಸುಳ್ಳು ಮಾಹಿತಿ ನೀಡುತ್ತಿದೆ. ವಾಸ್ತಾವಂಶದಲ್ಲಿ ಪ್ರಸ್ತತ ತಂದಿರುವ ಈ ಕಾನೂನುಗಳಲ್ಲಿ ಶೇ.90ರಷ್ಟು ಬ್ರಿಟಿಷರು ತಂದಿದ್ದ ಕಾನೂನುಗಳ ಸಾರಾಂಶವಿದೆ. ಆದರೆ ಬದಲಾಯಿಸಿರುವ ಶೇ.10ರಷ್ಟು ಕಾನೂನಿನ ಬಗ್ಗೆ ಆಳವಾಗಿ ಚಿಂತಿಸುವ ಅವಶ್ಯಕತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹೊಸ ಕ್ರಿಮಿನಲ್ ಕಾನೂನುಗಳ ಅವಸರದ ಅನುಷ್ಠಾನವು, ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿಯಲ್ಲಿ ವಿಳಂಬ ಉಂಟುಮಾಡುತ್ತದೆ ಮತ್ತು ಇದು ಎಲ್ಲ ಹಂತಗಳಲ್ಲಿನ ಪ್ರಕರಣಗಳ ಬಾಕಿಯನ್ನು ಮತ್ತಷ್ಟು ಹಚ್ಚಿಸಲು ಕಾರಣವಾಗುತ್ತದೆ. ಹೊಸ ಕಾನೂನುಗಳ ನಿಬಂಧನೆಗಳ ಹಿಂದಿನ ಅನ್ವಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಗೊಂದಲವಿದ್ದೂ, ಇದೂ ಕೂಡ ವಿಳಂಬಕ್ಕೆ ಕಾರಣವಾಗಲಿದೆ. ಹೊಸ ಕಾನೂನುಗಳ ಹಲವು ನಿಬಂಧನೆಗಳು ಸಾಂವಿಧಾನಿಕ ನ್ಯಾಯಾಲಯಗಳ ಮುಂದೆ ಅತ್ಯಂತ ಸವಾಲಾಗಿದೆ ಎಂದು ಕ್ಲಿಫ್ಟನ್ ನುಡಿದರು.
ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಣಾ ಸಮಯದಲ್ಲಿ ಚಿತ್ರಹಿಂಸೆ, ಸಾವು, ಸಾಕ್ಷಿ ರಕ್ಷಣೆ ಇನ್ನಿತರೆ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರಸ್ತುತವಾದ ಮತ್ತು ಅಗತ್ಯವಿರುವ ನಿಬಂಧನೆ, ತಿದ್ದುಪಡಿಗಳನ್ನು ಹೊಸ ಕಾನೂನುಗಳಲ್ಲಿ ತಂದಿಲ್ಲ. ಹೆಚ್ಚು ಆಕ್ಷೇಪಾರ್ಹ, ಅಸಂವಿಧಾನಿಕ ತರವಲ್ಲದ ಕಠಿಣ ನಿಬಂಧನೆಗಳನ್ನು ಹೊಸ ಕಾನೂನುಗಳಲ್ಲಿ ಸೇರಿಸಲಾಗಿದೆ. ಪೊಲೀಸ್ ಠಾಣೆ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬಂಧಿತ ಆರೋಪಿಯ ಹೆಸರು, ವಿಳಾಸ ಮತ್ತು ಅಪರಾಧದ ಸ್ವರೂಪವನ್ನು ಭೌತಿಕವಾಗಿ ಮತ್ತು ಡಿಜಿಟಲ್‌ನಲ್ಲಿ ಪ್ರದರ್ಶಿಸುವುದು, ಖಾಸಗಿತನದ ಹಕ್ಕಿನ ಮೇಲೆ ದಾಳಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅಸ್ತಿತ್ವದಲ್ಲಿರುವ ಐಪಿಸಿ, ಸಿಆರ್‌ಪಿಸಿ ಇಂಡಿಯನ್ ಎವಿಡೆನ್ಸ್ ಆಕ್ಟ್ ಅನ್ನು ಬದಲಿಸುವ ಹೊಸ ಮೂರು ಕಾನೂನುಗಳನ್ನು ಪರಿಚಯಿಸುವ ಸಂಪೂರ್ಣ ಯೋಜನೆಯು ನ್ಯಾಯಶಾಸ್ತ್ರ ಅಥವಾ ಕಾನೂನುಗಿಂತ ಹೆಚ್ಚಾಗಿ ವ್ಯವಸ್ಥಿತವಾದ ರಾಜಕೀಯ ಯೋಜನೆಯ ಭಾಗವಾಗಿದೆ. ರಾಜ್ಯ ಸರಕಾರವು ಕೇಂದ್ರ ಸರಕಾರದ ಸಮಿತಿಯೊಂದಿಗೆ ಮಾತ್ರ ಶಿಕ್ಷೆಯನ್ನು ಬದಲಾಯಿಸಬಹುದು ಎಂದು ಕಡ್ಡಾಯಗೊಳಿಸುವ ಮೂಲಕ ಫೆಡರಲ್ ಅಧಿಕಾರಗಳನ್ನು ಅತಿಕ್ರಮಿಸಿದೆ.ಆದ್ದರಿಂದ ಕೂಡಲೆ ಅನುಷ್ಠಾನವನ್ನು ರದ್ದುಗೊಳಿಸಬೇಕ ಎಂದು ಕ್ಲಿಫ್ಟನ್ ಆಗ್ರಹಿಸಿದರು.







